ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ವಲಯಕ್ಕೆ ದೊಡ್ಡ ಹಿನ್ನಡೆಯಾದ ನಂತರ ಕೇಂದ್ರಾಡಳಿತ ಪ್ರದೇಶದ ಆರ್ಥಿಕತೆಯನ್ನು ಪುನಃಸ್ಥಾಪಿಸಲು "ಕೇಂದ್ರೀಕೃತ" ಮತ್ತು "ದೃಢನಿಶ್ಚಯದ" ಕ್ರಮ ತೆಗೆದುಕೊಂಡ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಶ್ಲಾಘಿಸಿದ್ದಾರೆ.
2019 ರಿಂದ ದೇಶದ ಆರ್ಥಿಕ ಪ್ರಗತಿಯನ್ನು ಪ್ರತಿಬಿಂಬಿಸುತ್ತಾ, ಜಾಗತಿಕ ಮತ್ತು ದೇಶೀಯ ಸವಾಲುಗಳ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ನಿರ್ದಿಷ್ಟ ಪ್ರಯತ್ನಗಳನ್ನು ಕೇಂದ್ರ ಹಣಕಾಸು ಸಚಿವೆ ಎತ್ತಿ ತೋರಿಸಿದರು.
ನೇರವಾಗಿ ಪಾಕಿಸ್ತಾನವನ್ನು ಹೆಸರಿಸದೆ, ದೇಶವು "ನಮ್ಮ ಗಡಿಗಳೊಂದಿಗೆ ಸಾಕಷ್ಟು ತೊಂದರೆ ಎದುರಿಸುತ್ತಿದೆ. ಇದು ಯಾವಾಗಲೂ ಗಡಿ ರಾಜ್ಯಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರವನ್ನು ಉಲ್ಲೇಖಿಸಿದರು.
"ಈ ಬಾರಿ ಏನಾಯಿತು ಎಂದು ನೀವು ನೋಡಿದ್ದೀರಿ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ, ಆರ್ಥಿಕತೆಯು ಕೇಂದ್ರಾಡಳಿತ ಪ್ರದೇಶದ ಅಡಿಯಲ್ಲಿ ಚೇತರಿಸಿಕೊಳ್ಳುತ್ತಿದೆ" ಎಂದು ಸೀತಾರಾಮನ್ ಅವರು ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಹೇಳಿದ್ದಾರೆ.
ಕೇಂದ್ರವು ವಾಸ್ತವವಾಗಿ ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆಯನ್ನು ಗಮನಿಸಿ "ಅದನ್ನು ನಿಜವಾಗಿಯೂ ಮೇಲಕ್ಕೆತ್ತುವ ಮೂಲಕ ಅದು ಉತ್ಸಾಹಭರಿತವಾಗುವಂತೆ ಮಾಡಿದರು" ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.
"ಜಮ್ಮು ಮತ್ತು ಕಾಶ್ಮೀರ ಬ್ಯಾಂಕಿನ ಪುನಃಸ್ಥಾಪನೆ ದೇಶ ಹೆಮ್ಮೆಪಡಬಹುದಾದ ವಿಷಯ. ಜೆ-ಕೆ ಆರ್ಥಿಕತೆಯು ಪುನರುಜ್ಜೀವನಗೊಳ್ಳುತ್ತಿದೆ. ಬಾಹ್ಯ ಅಂಶಗಳಿಂದಾಗಿ ನಿರ್ಣಾಯಕ ಪ್ರವಾಸೋದ್ಯಮ ಸ್ಥಗಿತಗೊಂಡಿತ್ತು. ಪ್ರವಾಸೋದ್ಯಮ ಸಂಕಷ್ಟದ ನಂತರ ಆರ್ಥಿಕತೆಯನ್ನು ಪುನಃಸ್ಥಾಪಿಸುವತ್ತ ಗಮನಹರಿಸಿದ ಕಾಶ್ಮೀರ ಮುಖ್ಯಮಂತ್ರಿ, ಈ ಸಂಬಂಧ ಎರಡು ಬಾರಿ ನನ್ನನ್ನು ಭೇಟಿ ಮಾಡಿದ್ದನ್ನು ನಾನು ಶ್ಲಾಘಿಸಲೇಬೇಕು" ಎಂದು ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ಗುಂಡಿನ ದಾಳಿಯನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಸೀತಾರಾಮನ್ ಹೇಳಿದರು.