ನವದೆಹಲಿ: ರಾಷ್ಟ್ರೀಯ ಗೀತೆ 'ವಂದೇ ಮಾತರಂ'ಗೆ 150 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಈ ಕುರಿತ ಚರ್ಚೆಗೆ ಸೋಮವಾರ ಚಾಲನೆ ಸಿಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಚರ್ಚೆಯನ್ನು ಪ್ರಾರಂಭಿಸಲಿದ್ದು, 10 ಗಂಟೆಗಳ ಕಾಲ ಚರ್ಚೆ ನಡೆಯಲಿದೆ.
1937ರಲ್ಲಿ ವಂದೇ ಮಾತರಂನ ಪ್ರಮುಖ ಚರಣಗಳಿಗೆ ಕಾಂಗ್ರೆಸ್ ಕತ್ತರಿ ಹಾಕಿತು ಎಂದು ಈ ಹಿಂದೆ ಪ್ರಧಾನಿ ಮೋದಿ ಆರೋಪಿಸಿದ್ದರು. ಇದನ್ನು ಪ್ರಸ್ತಾವಿಸಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್, ಪ್ರಿಯಾಂಕಾ ಗಾಂಧಿ ವಾದ್ರಾ, ದೀಪೇಂದರ್ ಹೂಡಾ, ಮಣಿಪುರ ಸಂಸದ ಡಾ. ಬಿಮೋಲ್ ಅಕೋಯಿಜಮ್ ಮತ್ತು ಪ್ರಣಿತಿ ಶಿಂಧೆ ಸೇರಿದಂತೆ ಇತರರು ಚರ್ಚೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರಧಾನಿ ಮೋದಿಯವರ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವಪು ಮಾತನಾಡಲಿದ್ದಾರೆ.
ಇನ್ನು, ರಾಜ್ಯಸಭೆಯಲ್ಲಿ ಡಿ.9ರಂದು ಈ ಕುರಿತು ಚರ್ಚೆ ಆರಂಭವಾಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಸಭೆಯ ನಾಯಕ ಜೆ.ಪಿ. ನಡ್ಡಾ ಚರ್ಚೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ.
ನ.7ರಂದು ವಂದೇ ಮಾತರಂ (ತಾಯಿ ನಿನಗೆ ನಮಸ್ಕರಿಸುತ್ತೇನೆ)ನ 150ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ. ಬಂಕಿಮ್ ಚಂದ್ರ ಚಟರ್ಜಿ ರಚಿಸಿದ 'ವಂದೇ ಮಾತರಂ' 1875ರ ನವೆಂಬರ್ 7ರಂದು ಮೊದಲ ಬಾರಿಗೆ ಸಾಹಿತ್ಯ ಪತ್ರಿಕೆ ಬಂಗದರ್ಶನ್‌ನಲ್ಲಿ ಪ್ರಕಟವಾಗಿತ್ತು.
ನಂತರ, ಚಟರ್ಜಿ ಅವರು 1882ರಲ್ಲಿ ಪ್ರಕಟವಾದ ತಮ್ಮ ಅಮರ ಕಾದಂಬರಿ 'ಆನಂದಮಠ'ದಲ್ಲಿ ಈ ಸ್ತುತಿಗೀತೆಯನ್ನು ಸೇರಿಸಿದ್ದರು. ರವೀಂದ್ರನಾಥ ಟ್ಯಾಗೋರ್ ಈ ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ವಂದೇ ಮಾತರಂ ದೇಶದ ನಾಗರಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಅವಿಭಾಜ್ಯ ಅಂಗವಾಗಿದೆ.
ನ.7ರಂದು ದೆಹಲಿಯಲ್ಲಿ 'ವಂದೇ ಮಾತರಂ' ಗೀತೆಯ 150ನೇ ವರ್ಷದ ಸ್ಮರಣಾರ್ಥ ವಿಶೇಷ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅವರು, ವಂದೇ ಮಾತರಂ ಕೇವಲ ಒಂದು ಪದವಲ್ಲ, ಅದು ಒಂದು ಮಂತ್ರ, ಒಂದು ಶಕ್ತಿ, ಒಂದು ಕನಸು ಮತ್ತು ಒಂದು ಗಂಭೀರ ಸಂಕಲ್ಪ ಎಂದು ಹೇಳಿದ್ದರು. ವಂದೇ ಮಾತರಂ ಮಾತೆ ಭಾರತಿಗೆ ಭಕ್ತಿ ಮತ್ತು ಆಧ್ಯಾತ್ಮಿಕ ಸಮರ್ಪಣೆಯನ್ನು ಸಾಕಾರಗೊಳಿಸುತ್ತದೆ ಎಂದು ತಿಳಿಸಿದ್ದರು.
ಈ ಹಾಡು ಜನರನ್ನು ದೇಶದ ಇತಿಹಾಸದೊಂದಿಗೆ ಸಂಪರ್ಕಿಸುತ್ತದೆ, ವರ್ತಮಾನವನ್ನು ಆತ್ಮವಿಶ್ವಾಸದಿಂದ ತುಂಬುತ್ತದೆ ಮತ್ತು ಯಾವುದೇ ಸಂಕಲ್ಪವು ಈಡೇರಿಕೆಗೆ ಮೀರಿದ್ದಲ್ಲ ಮತ್ತು ಯಾವುದೇ ಗುರಿ ತಲುಪಲು ಅಸಾಧ್ಯವಲ್ಲ ಎಂದು ನಂಬುವ ಧೈರ್ಯದಿಂದ ಭವಿಷ್ಯವನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದರು.