ನವದೆಹಲಿ: ಆನ್‌ಲೈನ್‌ನಲ್ಲಿ "ಪೂಕಿ ಬಾಬಾ" ಎಂದೇ ಖ್ಯಾತರಾದ ಆಧ್ಯಾತ್ಮಿಕ ಗುರು ಅನಿರುದ್ಧಾಚಾರ್ಯ 25 ವರ್ಷ ವಯಸ್ಸಿನ ''ಅವಿವಾಹಿತ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಅಖಿಲ ಭಾರತ ಹಿಂದೂ ಮಹಾಸಭಾದ ಆಗ್ರಾ ಜಿಲ್ಲಾ ಅಧ್ಯಕ್ಷೆ ಮೀರಾ ರಾಥೋಡ್ ಸಲ್ಲಿಸಿದ ದೂರನ್ನು ಸ್ವೀಕರಿಸಿದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (CJM)ನ್ಯಾಯಾಲಯ ಇದೀಗ ಪ್ರಕರಣವನ್ನು ದಾಖಲಿಸಿದೆ. ಜನವರಿ 1ರಂದು ರಾಥೋಡ್ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಲಿದೆ.
ಏನು ಹೇಳಿದ್ರು ಗೊತ್ತಾ?
ಈಗ ಹುಡುಗಿಯರು 25 ನೇ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದಾರೆ. ಆದರೆ ಅದಕ್ಕೂ ಮೊದಲೇ ಆಕೆ ಎಷ್ಟೋ ಪುರುಷರ ಜೊತೆ ಇರುತ್ತಾಳೆ. ಅವಳ ಯೌವನವು ಎಲ್ಲೋ ಜಾರಬಹುದು ಎಂದು ಸ್ವಾಮೀಜಿ ಹೇಳಿದ್ದಾರೆ ಎನ್ನಲಾದ ವಿಡಿಯೋ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಅಷ್ಟೇ ಅಲ್ಲದೆ ಸ್ವಾಮೀಜಿ ಅವರು ಸೋನಮ್ ರಘುವಂಶಿ ಮತ್ತು ಮುಸ್ಕಾನ್ ರಸ್ತೋಗಿ ಪ್ರಕರಣಗಳನ್ನು ಉಲ್ಲೇಖಿಸಿ, ಈಗಿನ ಕಾಲದವರು ಪ್ರಿಯತಮನ ಜೊತೆಗೂಡಿ ಪತಿಯನ್ನೇ ಕೊಲೆ ಮಾಡುತ್ತಾರೆ. ಹಾಗಾಗಿ ಹೆಣ್ಣು ಮಕ್ಕಳಿಗೆ 14 ವರ್ಷಕ್ಕೆ ಮದುವೆ ಮಾಡಬೇಕು. ಆಗ ಆಕೆ ಕುಟುಂಬದ ಜೊತೆ ಹೊಂದಿಕೊಳ್ಳಲು ಸಾಧ್ಯ ಎಂದಿದ್ದರು.
ಈ ಹೇಳಿಕೆಗೆ ಆನ್‌ಲೈನ್‌ನಲ್ಲಿ ವ್ಯಾಪಕ ಟೀಕೆಗೆ ಕಾರಣವಾಯಿತು, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಮಹಿಳಾ ಗುಂಪುಗಳು ಮಹಿಳೆಯರನ್ನು ಕೀಳಾಗಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅನಿರುದ್ಧಾಚಾರ್ಯರ ಹೇಳಿಕೆಯನ್ನು ಸಾರ್ವಜನಿಕವಾಗಿ ಖಂಡಿಸಿರುವ ಹಿಂದೂ ಮಹಾಸಭಾದ ಆಗ್ರಾ ಘಟಕದ ನೇತೃತ್ವದ ರಾಥೋಡ್, ಅವರು ಆಧ್ಯಾತ್ಮಿಕ ಗುರುಗಳೇ ಅಲ್ಲ ಎಂದು ಕಿಡಿಕಾರಿದ್ದರು. ಆರಂಭದಲ್ಲಿ ಅವರು ವೃಂದಾವನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಯಾವುದೇ ಎಫ್‌ಐಆರ್ ದಾಖಲಾಗದಿದ್ದಾಗ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಜಡೆ ಕಟ್ಟದಿರುವ ಪ್ರತಿಜ್ಞೆ ಮಾಡಿದ್ದ ರಾಥೋಡ್: ಪ್ರತಿಭಟನೆಯ ಭಾಗವಾಗಿ "ಕೇಸ್ ದಾಖಲಾಗುವವರೆಗೂ ನನ್ನ ಜಡೆ ಕಟ್ಟುವುದಿಲ್ಲ ಎಂದು ನಿರ್ಧರಿಸಿದ್ದೆ. ಈಗ ನ್ಯಾಯಾಲಯ ನಮ್ಮ ಅರ್ಜಿಯನ್ನು ಸ್ವೀಕರಿಸಿದೆ, ಬಹುಶಃ ಅದನ್ನು ಮತ್ತೆ ಕಟ್ಟುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.
ಅನಿರುದ್ಧಾಚಾರ್ಯ ಸಮರ್ಥನೆ ಹೇಗಿತ್ತು?
ವೀಡಿಯೊ ತೀವ್ರ ಟೀಕೆಗೆ ಗುರಿಯಾದ ನಂತರ ಸ್ಪಷ್ಟೀಕರಣ ನೀಡಿದ್ದ ಅನಿರುದ್ಧಾಚಾರ್ಯ ಅವರು ಸ್ಪಷ್ಟೀಕರಣವನ್ನು ನೀಡಿದ್ದರು. ಪುರುಷ ಹಾಗೂ ಮಹಿಳೆಯರು ಇಬ್ಬರ ಬಗ್ಗೆಯೂ ಹೇಳಿಕೆ ನೀಡಿದ್ದೇನೆ. ಮದುವೆಯಾಗದ ಮಹಿಳೆಯರ ಬಗ್ಗೆ ಮಾತ್ರ ಹೇಳಿಕೆ ನೀಡಿಲ್ಲ. ಮಹಿಳೆ ಬಹು ಜನರೊಂದಿಗೆ ಸಂಬಂಧ ಹೊಂದುವುದು ಒಳ್ಳೆಯ ನಡತೆ ಅಲ್ಲ. ಅನೇಕ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವ ಪುರುಷನನ್ನು ವ್ಯಭಿಚಾರಿ (adulterer) ಎಂದು ಪರಿಗಣಿಸಲಾಗುತ್ತದೆ. ಈ ವಿಷಯವನ್ನು ಜನರಿಗೆ ವಿಕೃತ ರೀತಿಯಲ್ಲಿ ತೋರಿಸಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ತನ್ನ ಭಾಷಣದ ಪ್ರಮುಖ ಭಾಗಗಳನ್ನು ಡಿಲೀಟ್ ಮಾಡಲಾಗಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿ ತಾನು ಏನನ್ನೂ ಹೇಳಲು ಬಯಸಿದ್ದೇನೋ ಅದಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದು ಸಮರ್ಥಸಿಕೊಂಡಿದ್ದಾರೆ.