ಭಾರತ ದೇಶದ ಮೊದಲ ಫೆಮಿನಾ ಮಿಸ್ ಇಂಡಿಯಾ ಮತ್ತು ಪ್ರಸಿದ್ಧ ಫ್ಯಾಷನ್ ಪತ್ರಕರ್ತೆ ಮೆಹರ್ ಕ್ಯಾಸ್ಟೆಲಿನೊ ಅವರು ನಿಧನರಾಗಿದ್ದು, ಅವರ ನಿಧನಕ್ಕೆ ಭಾರತೀಯ ಫ್ಯಾಷನ್ ಸಮುದಾಯ ಶೋಕ ವ್ಯಕ್ತಪಡಿಸುತ್ತಿದೆ.
ಫ್ಯಾಷನ್ ಉದ್ಯಮದಲ್ಲಿ ಪ್ರವರ್ತಕಿಯಾಗಿದ್ದ ಅವರು, ಭಾರತೀಯ ಮಹಿಳೆಯರು ಆತ್ಮವಿಶ್ವಾಸ ಮತ್ತು ಆಕಾಂಕ್ಷೆಯೊಂದಿಗೆ ಸಾರ್ವಜನಿಕರ ಗಮನಕ್ಕೆ ಬರಲು ದಾರಿ ಮಾಡಿಕೊಟ್ಟವರು.
ಅವರ ಸಾವನ್ನು ಫೆಮಿನಾ ಮಿಸ್ ಇಂಡಿಯಾ ಸಂಸ್ಥೆ ದೃಢಪಡಿಸಿದ್ದು, ಸೋಷಿಯಲ್ ಮೀಡಿಯಾ ಮೂಲಕ ಗೌರವ ಸೂಚಿಸಿದೆ.
ಅವರನ್ನು ಮಾರ್ಗದರ್ಶಕಿ ಎಂದು ಬಣ್ಣಿಸುತ್ತಾ, ಕ್ಯಾಸ್ಟೆಲಿನೊ ಮಹಿಳೆಯರಿಗೆ ಅವಕಾಶದ ಬಾಗಿಲು ತೆರೆದು ಮಾನದಂಡಗಳನ್ನು ನಿಗದಿಪಡಿಸಿದ್ದರು. ತಲೆಮಾರುಗಳಿಂದ ಮಹಿಳೆಯರು ನಿರ್ಭಯವಾಗಿ ಕನಸು ಕಾಣಲು ಅಡಿಪಾಯ ಹಾಕಿಕೊಟ್ಟವರು ಎಂದು ಸಂಸ್ಥೆ ಹೇಳಿದೆ. ಮೊದಲ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿ ವಿಜೇತೆಯಾಗಿ, ಅವರ ಗೆಲುವು ಭಾರತೀಯ ಸೌಂದರ್ಯ ಸ್ಪರ್ಧೆಯ ಇತಿಹಾಸದಲ್ಲಿ ಒಂದು ನಿರ್ಣಾಯಕ ಕ್ಷಣವನ್ನು ಗುರುತಿಸಿದೆ ಎಂದು ಫೆಮಿನಾ ಮಿಸ್ ಇಂಡಿಯಾ ಸಂಸ್ಥೆ ಹೇಳಿದೆ.
1964 ರ ಫೆಮಿನಾ ಮಿಸ್ ಇಂಡಿಯಾ ಮತ್ತು ಮೊದಲ ಫೆಮಿನಾ ಮಿಸ್ ಇಂಡಿಯಾ ಆದ ಮೆಹರ್ ಕ್ಯಾಸ್ಟೆಲಿನೊ ಅವರ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ನಿಜವಾದ ಹಾದಿ ತೋರಿದ ಅವರು, ಮಹಿಳೆಯರು ನಿರ್ಭಯವಾಗಿ ಕನಸು ಕಾಣಲು ಅವಕಾಶ ತೆರೆದವರು. ನಿಜವಾದ ಅರ್ಥದಲ್ಲಿ ಪ್ರವರ್ತಕರಾಗಿದ್ದ ಅವರ ಪರಂಪರೆ ಅವರು ಸಾಧ್ಯವಾಗಿಸಿದ ಪ್ರಯಾಣಗಳು ಮತ್ತು ಅವರು ರೂಪಿಸಲು ಸಹಾಯ ಮಾಡಿದ ಕನಸುಗಳ ಮೂಲಕ ಜೀವಿಸುತ್ತದೆ. ಅವರ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಪರಂಪರೆ ಶಾಶ್ವತವಾಗಿ ಬೆಳಗಲಿ ಎಂದು ಫೆಮಿನಾ ಮಿಸ್ ಇಂಡಿಯಾದ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಪೋಸ್ಟ್ ಮಾಡಿದೆ
ಅಧಿಕೃತ ಖಾತೆಯು ಅವರ ರ‍್ಯಾಂಪ್ ವಾಕ್ ನ್ನು ಒಳಗೊಂಡ ವಿಡಿಯೊವನ್ನು ಸಹ ಪೋಸ್ಟ್ ಮಾಡಿದೆ.
ಮುಂಬೈನಲ್ಲಿ ಜನಿಸಿದ ಮೆಹರ್, 1964 ರಲ್ಲಿ ಮೊದಲ ಫೆಮಿನಾ ಮಿಸ್ ಇಂಡಿಯಾ ಕಿರೀಟ ಧರಿಸಿದರು. ಭಾರತದಲ್ಲಿ ಸೌಂದರ್ಯ ಸ್ಪರ್ಧೆಗಳು ಮತ್ತು ಫ್ಯಾಷನ್ ಸಂಸ್ಕೃತಿ ಇನ್ನೂ ವಿಕಸನಗೊಳ್ಳುತ್ತಿರುವ ಸಮಯದಲ್ಲಿ ಕ್ಯಾಸ್ಟೆಲಿನೊ ಅವರು ಈ ಸಾಧನೆ ಮಾಡಿದ್ದರು.