ಭೋಪಾಲ್ (ಮಧ್ಯಪ್ರದೇಶ): ತಲೆಸ್ಸೇಮಿಯಾದಿಂದ ಬಳಲುತ್ತಿದ್ದ 6 ಮಕ್ಕಳು ಜೀವರಕ್ಷಕ ಚಿಕಿತ್ಸೆಗಾಗಿ ರಕ್ತ ಪಡೆದ ಬಳಿಕ ಅವರಲ್ಲಿ ಎಚ್‍ಐವಿ ಸೋಂಕು ಪತ್ತೆಯಾಗಿದ್ದು, ಈ ಘಟನೆ ಮಧ್ಯಪ್ರದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ಬಹಿರಂಗಪಡಿಸಿದೆ.
ಸಾತ್ನಾದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಈ ಮಕ್ಕಳಿಗೆ ಎಚ್‍ಐವಿ ಸೋಂಕಿತ ರಕ್ತವನ್ನು ನೀಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಜೀವರಕ್ಷಣೆಗಾಗಿ ನಿರಂತರ ರಕ್ತ ಮರುಪೂರಣ ಚಿಕಿತ್ಸೆ ಪಡೆಯುತ್ತಿದ್ದ ತಲೆಸ್ಸೇಮಿಯಾ ಮಕ್ಕಳಿಗೆ ವಿವಿಧ ಬ್ಲಡ್‍ಬ್ಯಾಂಕ್‍ಗಳಿಂದ ತಂದ ಒಟ್ಟು 189 ಯುನಿಟ್ ರಕ್ತ ನೀಡಲಾಗಿತ್ತು. 150 ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ನೀಡಲಾಗಿತ್ತು ಎನ್ನಲಾಗಿದೆ.
6 ಮಕ್ಕಳಿಗೆ ಹೆಚ್ಐವಿ ಸೋಂಕು ಇರುವುದು ಪತ್ತೆಯಾಗಿದ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ತನಿಖೆ ನಡೆಸಲಾಗಿದ್ದು, ತನಿಖಯಲ್ಲಿ ದಾನಿಗಳ ಮೂಲಕ ಪಡೆದ ರಕ್ತ ದಾನದಿಂದ ಎಚ್‍ಐವಿ ಸೋಂಕು ತಗುಲಿರುವುದು ದೃಢಪಟ್ಟಿದೆ.
6 ಮಕ್ಕಳ ಪೈಕಿ ಒಂದುು ಮಗುವಿನ ಪೋಷಕರಲ್ಲಿಯೂ ಎಚ್‌ಐವಿ ಪಾಸಿಟಿವ್ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ತ ಸ್ವೀಕರಿಸುವ ವೇಳೆ ಪಾಲಿಸಬೇಕಾದ ಸ್ಕ್ರೀನಿಂಗ್ ಮಾಡದೇ ಇರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಇದರ ಬೆನ್ನಲ್ಲೇ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಬ್ಲಡ್‍ಬ್ಯಾಂಕ್‍ನ ಹೊಣೆ ಹೊಂದಿದ್ದ ಸರ್ಕಾರಿ ರಕ್ತ ನಿಧಿಯ ಉಸ್ತುವಾರಿ ಸೇರಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ರಕ್ತ ನಿಧಿಯ ಉಸ್ತುವಾರಿ ಡಾ. ದೇವೇಂದ್ರ ಪಟೇಲ್ ಮತ್ತು ಪ್ರಯೋಗಾಲಯ ತಂತ್ರಜ್ಞರಾದ ರಾಮ್ ಭಾಯ್ ತ್ರಿಪಾಠಿ ಮತ್ತು ನಂದಲಾಲ್ ಪಾಂಡೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಲ್ಲದೆ, ಸಾತ್ನಾ ಜಿಲ್ಲಾ ಆಸ್ಪತ್ರೆಯ ಮಾಜಿ ಸಿವಿಲ್ ಸರ್ಜನ್ ಡಾ.ಮನೋಜ್ ಶುಕ್ಲಾ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಇದೀಗ ಆರು ಮಕ್ಕಳು ಪ್ರಸ್ತುತ ಎಚ್‌ಐವಿ ಚಿಕಿತ್ಸಾ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಈ ನಡುವೆ ಅಂತಿಮ ತನಿಖಾ ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.