ನವದೆಹಲಿ: ಬಾಂಗ್ಲಾದೇಶವು ದೆಹಲಿಯಲ್ಲಿರುವ ತನ್ನ ಹೈಕಮಿಷನ್ ಮತ್ತು ತ್ರಿಪುರದಲ್ಲಿರುವ ತನ್ನ ಮಿಷನ್‌ನಲ್ಲಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ. ಎರಡೂ ದೇಶಗಳ ನಡುವಿನ ಸಂಬಂಧಗಳಲ್ಲಿ ಹೆಚ್ಚುತ್ತಿರುವ ಒತ್ತಡದ ನಡುವೆ ಈ ಬೆಳವಣಿಗೆ ಉಂಟಾಗಿದೆ.
ಪ್ರತಿಭಟನಾಕಾರರ ಗುಂಪುಗಳು ಎರಡು ಮಿಷನ್‌ಗಳ ಹೊರಗೆ ಪ್ರದರ್ಶನಗಳನ್ನು ನಡೆಸಿದ ನಂತರ ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ ಅನಿವಾರ್ಯ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.
ಮೊನ್ನೆ ಭಾನುವಾರ ಮಿಷನ್ ಹೊರಗೆ ಪ್ರತಿಭಟನೆಗಳು ನಡೆದ ನಂತರ ತ್ರಿಪುರದಲ್ಲಿರುವ ಬಾಂಗ್ಲಾದೇಶದ ಸಹಾಯಕ ಹೈಕಮಿಷನ್ ಕೂಡ ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಇದೇ ರೀತಿಯ ಘೋಷಣೆ ಮಾಡಿದೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ವೀಸಾ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಬಾಂಗ್ಲಾದೇಶ ನಿಯೋಜಿಸಿದ ಖಾಸಗಿ ಆಪರೇಟರ್ ಕೂಡ ತನ್ನ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ. ಕಳೆದ ವಾರ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಗುಂಡೇಟಿಕೆ ಮೃತಪಟ್ಟ ನಂತರ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತು.
ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಹಾದಿ ಪ್ರಮುಖ ವ್ಯಕ್ತಿಯಾಗಿದ್ದರು. ಕಳೆದ ವಾರ ಕೆಲವು ಪ್ರತಿಭಟನಾಕಾರರು ಭಾರತದ ವಿರುದ್ಧವೂ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದರು. ಹೊಸ ಪ್ರತಿಭಟನೆಗಳ ನಡುವೆ, ಬಾಂಗ್ಲಾದೇಶದ ಮೈಮೆನ್ಸಿಂಗ್‌ನಲ್ಲಿ ಹಿಂದು ದೀಪು ಚಂದ್ರ ದಾಸ್ ಹತ್ಯೆಯಾಗಿತ್ತು.
ಕಳೆದ ಗುರುವಾರ ಉದ್ರಿಕ್ತ ಗುಂಪು ಚಿತ್ತಗಾಂಗ್‌ನಲ್ಲಿರುವ ಭಾರತದ ಸಹಾಯಕ ಹೈಕಮಿಷನ್‌ಗೆ ನುಗ್ಗಲು ಪ್ರಯತ್ನಿಸಿತು. ಭಾರತವು ತನ್ನ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿತು. ಭಾರತವು ಬುಧವಾರ ಬಾಂಗ್ಲಾದೇಶದ ರಾಯಭಾರಿ ರಿಯಾಜ್ ಹಮೀದುಲ್ಲಾ ಅವರನ್ನು ಕರೆಸಿ, ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸುತ್ತಲೂ ಭದ್ರತಾ ಪರಿಸ್ಥಿತಿಯನ್ನು ಸೃಷ್ಟಿಸುವ ಯೋಜನೆಗಳನ್ನು ಘೋಷಿಸುವ ಕೆಲವು ಉಗ್ರಗಾಮಿ ಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿತು.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳ ಕುರಿತು ಉಗ್ರಗಾಮಿ ಅಂಶಗಳು ಸೃಷ್ಟಿಸಲು ಪ್ರಯತ್ನಿಸಿದ ಸುಳ್ಳು ಆರೋಪಗಳನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಹಂಗಾಮಿ ಸರ್ಕಾರವು ಘಟನೆಗಳ ಕುರಿತು ಸಂಪೂರ್ಣ ತನಿಖೆ ನಡೆಸಿಲ್ಲ ಅಥವಾ ಭಾರತದೊಂದಿಗೆ ಅರ್ಥಪೂರ್ಣ ಪುರಾವೆಗಳನ್ನು ಹಂಚಿಕೊಂಡಿಲ್ಲ ಎಂದು ಹೇಳಿದೆ.