ನವದೆಹಲಿ: 17 ವರ್ಷಗಳ ನಂತರ ಬಿಎನ್‌ಪಿ ನಾಯಕ ತಾರಿಕ್ ರೆಹಮಾನ್ ಢಾಕಾಗೆ ಮರಳಿದ್ದು ದೇಶದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ರಾಜಕೀಯ ಪಕ್ಷವಾದ ಶೇಖ್ ಹಸೀನಾ ಅವರ ಅವಾಮಿ ಲೀಗ್ ಮೇಲಿನ ನಿಷೇಧದ ನಂತರ ಬಾಂಗ್ಲಾದೇಶದಲ್ಲಿ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದಿದೆ. ಹಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದಂತೆ, ಬಾಂಗ್ಲಾದೇಶದಲ್ಲಿ ಮುಕ್ತ, ನ್ಯಾಯಯುತ, ಎಲ್ಲರನ್ನೂ ಒಳಗೊಂಡ,ಎಲ್ಲರೂ ಸಕ್ರಿಯವಾಗಿ ಭಾಗಿಯಾಗಬೇಕಾದ ಚುನಾವಣೆಗೆ ಭಾರತ ಬೆಂಬಲ ವ್ಯಕ್ತಪಡಿಸಿದೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಬಾಂಗ್ಲಾದೇಶದ ಬಗ್ಗೆ ಭಾರತದ ವಿಶಾಲ ದೃಷ್ಟಿಕೋನವನ್ನು ವಿವರಿಸಿದರು. ಬಾಂಗ್ಲಾದೇಶದ ಜನರೊಂದಿಗಿನ ಸಂಬಂಧಕ್ಕೆ ಭಾರತ ನೀಡುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ವಿಮೋಚನಾ ಹೋರಾಟದಲ್ಲಿ ಬೇರೂರಿರುವ ಮತ್ತು ವಿವಿಧ ಅಭಿವೃದ್ಧಿ ಮತ್ತು ಜನರಿಂದ ಜನರಿಗೆ ಉಪಕ್ರಮಗಳ ಮೂಲಕ ಬಲಪಡಿಸಲಾದ ಬಾಂಗ್ಲಾದೇಶದ ಜನರೊಂದಿಗೆ ಭಾರತ ನಿಕಟ ಮತ್ತು ಸ್ನೇಹಪರ ಸಂಬಂಧ ಹೊಂದಲು ಬಯಸುತ್ತದೆ ಎಂದರು.
ಬಾಂಗ್ಲಾದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಸಂದರ್ಭದಲ್ಲಿ, ನಾವು ಬಾಂಗ್ಲಾದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಬಯಸುತ್ತೇವೆ. ಶಾಂತಿಯುತ ವಾತಾವರಣದಲ್ಲಿ ಮುಕ್ತ, ನ್ಯಾಯಯುತ ಮತ್ತು ವಿಶ್ವಾಸಾರ್ಹ ಚುನಾವಣೆಗಳನ್ನು ನಡೆಸಬೇಕೆಂದು ನಿರಂತರವಾಗಿ ಕರೆ ನೀಡುತ್ತಿದ್ದೇವೆ ಎಂದರು.
ಲಂಡನ್‌ನಿಂದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ನಾಯಕ ತಾರಿಕ್ ರೆಹಮಾನ್ ಅವರ ಮರಳುವಿಕೆಯ ಬಗ್ಗೆ ನಿರ್ದಿಷ್ಟವಾಗಿ ಕೇಳಿದಾಗ, ಪ್ರಜಾಪ್ರಭುತ್ವ ಪ್ರಕ್ರಿಯೆಯ ಕುರಿತು ಭಾರತದ ನಿಲುವನ್ನು ಪುನರುಚ್ಚರಿಸಿದರು. ಬಾಂಗ್ಲಾದೇಶದಲ್ಲಿ ಮುಕ್ತ, ನ್ಯಾಯಯುತ ಮತ್ತು ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆಯ ಚುನಾವಣೆಗಳನ್ನು ನಾವು ಬೆಂಬಲಿಸುತ್ತೇವೆ. ಲಂಡನ್‌ನಿಂದ ಬಿಎನ್‌ಪಿ ನಾಯಕನ ಮರಳುವಿಕೆಯನ್ನು ಆ ಸಂದರ್ಭದಲ್ಲಿ ನೋಡಬೇಕು ಎಂದರು.
ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದೊಂದಿಗಿನ ಉದ್ವಿಗ್ನತೆಯ ಹೊರತಾಗಿಯೂ, ಬಾಂಗ್ಲಾದೇಶದೊಂದಿಗೆ ಭಾರತದ ಸಾಲ ಮತ್ತು ಅಭಿವೃದ್ಧಿ ಸಹಕಾರವು ಮೊದಲಿನಂತೆಯೇ ಮುಂದುವರಿಯುತ್ತದೆ ಎಂದು ಜೈಸ್ವಾಲ್ ಹೇಳಿದರು.
ನಾವು ಬಾಂಗ್ಲಾದೇಶದ ಜನರೊಂದಿಗೆ ಬಲವಾದ ಮತ್ತು ಆಳವಾದ ಸಂಬಂಧಗಳನ್ನು ಹೊಂದಲು ಬಯಸುತ್ತೇವೆ. ನಮ್ಮ ಅಭಿವೃದ್ಧಿ ಸಹಾಯವನ್ನು ಆ ನಿಟ್ಟಿನಲ್ಲಿ ನೋಡಬೇಕು ಎಂದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ಪದಚ್ಯುತಗೊಂಡ ನಂತರ ಭಾರತದಲ್ಲಿ ಆಶ್ರಯ ಪಡೆದಿದ್ದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹಸ್ತಾಂತರದ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜೈಸ್ವಾಲ್, ಈ ವಿಷಯದ ಬಗ್ಗೆ ಭಾರತದ ನಿಲುವು ಬದಲಾಗಿಲ್ಲ ಎಂದು ಹೇಳಿದರು.
ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿ ಮಧ್ಯಂತರ ಸರ್ಕಾರ ಭಾರತಕ್ಕೆ ಪತ್ರ ಬರೆದಾಗಿನಿಂದ, ಭಾರತ ಅದನ್ನು ಪರಿಶೀಲಿಸುತ್ತಿದೆ ಎಂದರು.
ಭಾರತದ ಒಟ್ಟಾರೆ ವಿಧಾನವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ವಕ್ತಾರರು, ಬಾಂಗ್ಲಾದೇಶದೊಂದಿಗೆ ನಾವು ವಿಶಾಲವಾದ ಸಂಬಂಧಗಳನ್ನು ಹೊಂದಿದ್ದೇವೆ. ಆದರೂ ಈಗ ಪರಿಸ್ಥಿತಿಗಳು ಸ್ವಲ್ಪ ಭಿನ್ನವಾಗಿವೆ. ನಾವು ಶಾಂತಿ ಮತ್ತು ಸ್ಥಿರತೆ ಪರ ನಿಲ್ಲುತ್ತೇವೆ. ಬಾಂಗ್ಲಾದೇಶದ ಜನರೊಂದಿಗೆ ಬಲವಾದ ಸಂಬಂಧಗಳನ್ನು ಹೊಂದಲು ಬಯಸುತ್ತೇವೆ ಎಂದರು.