ನವದೆಹಲಿ: ಆಪರೇಷನ್ ಸಿಂಧೂರ ಬಳಿಕ ಭಾರತ ಹಲವು ಅಸ್ತ್ರಗಳ ಪರೀಕ್ಷೆ ನಡೆಸುತ್ತಿದ್ದು, ತನ್ನ ಶಕ್ತಿ ಎಂತದ್ದು ಎಂಬುದನ್ನು ತೋರಿಸುತ್ತಿದೆ. ಇದೀಗ ಬುಧವಾರ ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಎರಡು 'ಪ್ರಳಯ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಶತ್ರು ಪಾಳಯದಲ್ಲಿ ನಡುಕ ಹುಟ್ಟಿಸಿದೆ.
'ಪ್ರಳಯ್' ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಅರೆ-ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇದು ಹೆಚ್ಚಿನ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ಸಂಚರಣೆ ವ್ಯವಸ್ಥೆಯನ್ನು ಒಳಗೊಂಡಿದೆ.
ಇದು ವಿವಿಧ ಗುರಿಗಳ ವಿರುದ್ಧ ಹಲವು ವಿಧದ ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಈ ಕ್ಷಿಪಣಿಗಳ ಪರೀಕ್ಷಾರ್ಥ ಹಾರಾಟವನ್ನು ನಡೆಸಿತು.
"ಹಾರಾಟ-ಪರೀಕ್ಷೆಯ ಸಂದರ್ಭದಲ್ಲಿ ಟ್ರ್ಯಾಕಿಂಗ್ ಸಂವೇದಕಗಳಿಂದ ದೃಢೀಕರಿಸಲ್ಪಟ್ಟಂತೆ ಎರಡೂ ಕ್ಷಿಪಣಿಗಳು ಉದ್ದೇಶಿತ ಪಥವನ್ನು ಅನುಸರಿಸಿದವು ಮತ್ತು ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿದ್ದವು" ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.