ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಕುಡಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮೋಹನ್ ಯಾದವ್, ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಿದೆ ಮತ್ತು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.
ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ನಾಲ್ವರು ಮಹಿಳೆಯರು ಸೇರಿದಂತೆ ಐದು ಜನರು ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಡಿಸೆಂಬರ್ 25 ರಂದು ಸರಬರಾಜು ಮಾಡಲಾದ ನೀರು ವಾಸನೆಯಿಂದ ಕೂಡಿತ್ತು. ಅದನ್ನು ಜನರು ಅದನ್ನು ಸೇವಿಸಿದ ನಂತರ ಅಸ್ವಸ್ಥರಾಗಿರಬಹುದು ಎಂದು ಭಾಗೀರಥಪುರ ನಿವಾಸಿಗಳು ದೂರಿದ್ದಾರೆ .
ಭಗೀರಥಪುರದ ಒಂದು ಸ್ಥಳದಲ್ಲಿ ಮುಖ್ಯ ನೀರು ಸರಬರಾಜು ಪೈಪ್‌ಲೈನ್‌ನಲ್ಲಿ ಸೋರಿಕೆ ಪತ್ತೆಯಾಗಿದೆ, ಅದರ ಮೇಲೆ ಶೌಚಾಲಯ ನಿರ್ಮಿಸಲಾಗಿದೆ ಎಂದು ಪುರಸಭೆ ಆಯುಕ್ತ ದಿಲೀಪ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಭಾಗೀರಥಪುರದಲ್ಲಿ ಅತಿಸಾರ ಕಾಣಿಸಿಕೊಂಡ ವರದಿಗಳ ನಂತರ, ಆರೋಗ್ಯ ಇಲಾಖೆಯು 2,703 ಮನೆಗಳನ್ನು ಸಮೀಕ್ಷೆ ಮಾಡಿ ಸುಮಾರು 12,000 ಜನರನ್ನು ಪರೀಕ್ಷಿಸಿದೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CMHO) ಡಾ. ಮಾಧವ ಪ್ರಸಾದ್ ಹಸಾನಿ ಹೇಳಿದರು. 1,146 ರೋಗಿಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಗಂಭೀರ ಸ್ಥಿತಿಯಲ್ಲಿರುವ 111 ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ 18 ಜನರನ್ನು ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅವರು ಹೇಳಿದರು. ಕಲುಷಿತ ನೀರನ್ನು ಕುಡಿದ ನಂತರ ವಾಂತಿ, ಅತಿಸಾರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ ಎಂದು ರೋಗಿಗಳು ಹೇಳಿದ್ದಾರೆ" ಎಂದು ಹಸಾನಿ ಹೇಳಿದರು.