ರಾಜ್ಯಸಭೆ 
ದೇಶ

ಮಹಾ ಕುಂಭ ಮೇಳದಲ್ಲಿ ಕಾಲ್ತುಳಿತ: ಚರ್ಚೆಗೆ ಆಗ್ರಹಿಸಿ ಲೋಕಸಭೆಯಲ್ಲಿ ಪ್ರತಿಭಟನೆ; ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಂದ ಸಭಾತ್ಯಾಗ

ಕಾಂಗ್ರೆಸ್ ನಾಯಕರಾದ ಪ್ರಮೋದ್ ತಿವಾರಿ ಮತ್ತು ದಿಗ್ವಿಜಯ ಸಿಂಗ್, ಟಿಎಂಸಿಯ ಸಾಗರಿಕಾ ಘೋಷ್, ಸಮಾಜವಾದಿ ಪಕ್ಷದ ಜಾವೇದ್ ಅಲಿ ಮತ್ತು ರಾಮ್‌ಜಿ ಲಾಲ್ ಸುಮನ್ ಮತ್ತು ಸಿಪಿಐ ಪಕ್ಷಧ ಜಾನ್ ಬ್ರಿಟಾಸ್ ಅವರು ಮಹಾಕುಂಭ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿ ನೋಟಿಸ್ ನೀಡಿದ್ದರು.

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಕಳೆದ ವಾರ ಸಂಭವಿಸಿದ ಕಾಲ್ತುಳಿತದಲ್ಲಿ ಹಲವಾರು ಮಂದಿ ಸಾವಿಗೀಡಾಗಿದ್ದು, ಈ ಬಗ್ಗೆ ತಕ್ಷಣವೇ ಚರ್ಚೆ ನಡೆಸಬೇಕೆಂಬ ತಮ್ಮ ಬೇಡಿಕೆಯನ್ನು ಸಭಾಪತಿ ಅಂಗೀಕರಿಸದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸೋಮವಾರ ರಾಜ್ಯಸಭೆಯಿಂದ ಹೊರನಡೆದವು.

ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ವಿಚಾರ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲು ಇಂದಿನ ಕಾರ್ಯಕಲಾಪದ ಪಟ್ಟಿಯನ್ನು ಅಮಾನತುಗೊಳಿಸುವಂತೆ ಕೋರಿ ನಿಯಮ 267ರ ಅಡಿಯಲ್ಲಿ ಒಂಭತ್ತು ನೋಟಿಸ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಸಭಾಪತಿ ಜಗದೀಪ್ ಧಂಖರ್ ತಿಳಿಸಿದರು.

ಕಾಂಗ್ರೆಸ್ ನಾಯಕರಾದ ಪ್ರಮೋದ್ ತಿವಾರಿ ಮತ್ತು ದಿಗ್ವಿಜಯ ಸಿಂಗ್, ಟಿಎಂಸಿಯ ಸಾಗರಿಕಾ ಘೋಷ್, ಸಮಾಜವಾದಿ ಪಕ್ಷದ ಜಾವೇದ್ ಅಲಿ ಮತ್ತು ರಾಮ್‌ಜಿ ಲಾಲ್ ಸುಮನ್ ಮತ್ತು ಸಿಪಿಐ ಪಕ್ಷಧ ಜಾನ್ ಬ್ರಿಟಾಸ್ ಅವರು ಮಹಾಕುಂಭ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿ ನೋಟಿಸ್ ನೀಡಿದ್ದರು.

'ಸಂವಿಧಾನ ಮತ್ತು ಬಿಆರ್ ಅಂಬೇಡ್ಕರ್ ಅವರಿಗೆ ಅಗೌರವ ತೋರುವ ಘಟನೆಗಳು ಮತ್ತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವರು ನೀಡಿದ್ದ ತಾರತಮ್ಯ ಮತ್ತು ಜಾತಿವಾದಿ ಹೇಳಿಕೆಗಳಿಗೆ' ಸಂಬಂಧಿಸಿದ ವಿಚಾರಗಳ ಚರ್ಚೆಗೆ ಒತ್ತಾಯಿಸಲಾಗಿದೆ.

ನಿಯಮ 267ರ ಅಡಿಯಲ್ಲಿ ಸಲ್ಲಿಕೆಯಾಗಿದ್ದ ನೋಟಿಸ್‌ಗಳಿಗೆ ಸಂಬಂಧಿಸಿದಂತೆ ಸಭಾಪತಿ ಧಂಖರು ಅವರು ಚರ್ಚೆಗೆ ಅವಕಾಶ ನೀಡಲಿಲ್ಲ. ಬಳಿಕ ನಿಗದಿಯಂತೆ ಶೂನ್ಯವೇಳೆ ಮುಂದುವರಿಯಿತು.

ಚರ್ಚೆಗೆ ಅವಕಾಶ ನೀಡದಿದ್ದರಿಂದ ಕಾಂಗ್ರೆಸ್, ಎಸ್‌ಪಿ, ಡಿಎಂಕೆ, ಎಎಪಿ, ಆರ್‌ಜೆಡಿ, ಸಿಪಿಐ ಮತ್ತು ಸಿಪಿಎಂ ಸೇರಿದಂತೆ ವಿರೋಧ ಪಕ್ಷಗಳ ಸಂಸದರು ತೀವ್ರ ಪ್ರತಿಭಟನೆ ನಡೆಸಿದರು. ಮೌನಿ ಅಮಾವಾಸ್ಯೆಯಂದು ಮಹಾಕುಂಭದಲ್ಲಿ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವಿಗೀಡಾಗಿದ್ದು, ಅದನ್ನು ಎತ್ತಿ ತೋರಿಸುವ ಪ್ರಯತ್ನದಲ್ಲಿ ಹಲವಾರು ಸಂಸದರು ಘೋಷಣೆಗಳನ್ನು ಕೂಗಿದರು. ನಂತರ ಸದಸ್ಯರು ಸಭಾತ್ಯಾಗ ಮಾಡಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಮಾತನಾಡಿದ ಧಂಖರ್, ರಾಜ್ಯಸಭೆಯು ದೇಶದ ಸಾಂವಿಧಾನಿಕ ಪ್ರಯಾಣದಲ್ಲಿ ಒಂದು ಮೈಲಿಗಲ್ಲು ಮತ್ತು ಸದನದಲ್ಲಿ ತಮ್ಮ ನಡವಳಿಕೆಗಳು ಅನುಕರಣೀಯವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಂಸದರಿಗೆ ಮನವಿ ಮಾಡಿದರು.

ಲೋಕಸಭೆಯಲ್ಲಿ ಪ್ರತಿಭಟನೆ

ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ನಡೆದ ಮಹಾಕುಂಭದಲ್ಲಿ ನಡೆದ ಕಾಲ್ತುಳಿತದ ಕುರಿತು ಚರ್ಚೆಗೆ ಆಗ್ರಹಿಸಿ ವಿಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸದನ ಸೇರಿದಾಗ, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಸಂಸದರು ಮಹಾಕುಂಭದಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಕೂಡಲೇ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗೆ ನುಗ್ಗಿ ಗದ್ದಲ, ಘೋಷಣೆ ಕೂಗಿದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ನೇತೃತ್ವದಲ್ಲಿ ವಿಪಕ್ಷ ಸದಸ್ಯರು ಪ್ರಶ್ನೋತ್ತರ ಅವಧಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು. ಕಾಲ್ತುಳಿತದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು ಮತ್ತು ಕಾಲ್ತುಳಿತದಲ್ಲಿ ಸಾವಿಗೀಡಾದವರ ಸಂಪೂರ್ಣ ಪಟ್ಟಿಯನ್ನು ಕೇಳಿದರು.

ರಾಷ್ಟ್ರಪತಿಗಳು ಜಂಟಿ ಸದನವನ್ನುದ್ದೇಶಿಸಿ ಮಾಡಿದ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಬಹುದು ಎಂದು ಸ್ಪೀಕರ್ ಓಂ ಬಿರ್ಲಾ ಪ್ರತಿಭಟನಾನಿರತ ಸದಸ್ಯರಿಗೆ ತಿಳಿಸಿದರು.

'ಪ್ರಮುಖ ವಿಷಯಗಳ ಚರ್ಚೆ ನಡೆಯುವ ಪ್ರಶ್ನೋತ್ತರ ವೇಳೆಗೆ ಅಡ್ಡಿಪಡಿಸಬಾರದು ಮತ್ತು ವಿರೋಧ ಪಕ್ಷದ ಸದಸ್ಯರು ಸದನ ಸುಗಮವಾಗಿ ನಡೆಯಲು ಅವಕಾಶ ನೀಡಬೇಕು. ಸದನ ಸರಿಯಾಗಿ ನಡೆಯುವುದು ನಿಮಗೆ ಇಷ್ಟವಿಲ್ಲ. ಸದನಕ್ಕೆ ಅಡ್ಡಿಪಡಿಸಲು ಮತ್ತು ಘೋಷಣೆಗಳನ್ನು ಕೂಗಲೆಂದು ಜನರು ನಿಮ್ಮನ್ನು ಆಯ್ಕೆ ಮಾಡಿದ್ದಾರೆಯೇ' ಎಂದು ಪ್ರಶ್ನಿಸಿದರು.

ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಎಸ್‌ಪಿ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಪ್ರಶ್ನೋತ್ತರ ಅವಧಿ ಮುಗಿದ ನಂತರ ಸ್ವಲ್ಪ ಹೊತ್ತು ಸಭಾತ್ಯಾಗ ಮಾಡಿದರು. ನಂತರ ಅವರು ವಾಪಸಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

SCROLL FOR NEXT