ಇಂದೋರ್: ದೆಹಲಿಯ 70 ವಿಧಾನಸಭಾ ಸ್ಥಾನಗಳ ಪೈಕಿ 48 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, "ತುಕ್ಡೆ-ತುಕ್ಡೆ ಗ್ಯಾಂಗ್"ನ ಭಾಗವಾಗಿದ್ದ ಮತ್ತು ಸಂಕುಚಿತ ಮನಸ್ಥಿತಿಯನ್ನು ಹೊಂದಿದ್ದ ನಾಯಕರು ನಿರಂತರವಾಗಿ ಸೋಲು ಅನುಭವಿಸುತ್ತಿದ್ದಾರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಶನಿವಾರ ಹೇಳಿದ್ದಾರೆ.
ಇಂದೋರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ವಿರೋಧ ಪಕ್ಷಗಳು ಚುನಾವಣೆಯಲ್ಲಿ ಪದೇ ಪದೇ ಸೋತ ನಂತರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕರೊಂದಿಗಿನ ಸಂಬಂಧ, ಅವರ ಕಠಿಣ ಪರಿಶ್ರಮ ಮತ್ತು ದೇಶದ ಬದಲಾಗುತ್ತಿರುವ ಮನಸ್ಥಿತಿ ಒಂದೇ ದಿಕ್ಕಿನತ್ತ ಸಾಗುತ್ತಿದೆ ಎಂದು ಅವರು ಹೇಳಿದರು.
"ತುಕ್ಡೆ-ತುಕ್ಡೆ ಗ್ಯಾಂಗಿನ ಭಾಗವಾಗಿರುವ, ಸಂಕುಚಿತ ಮನಸ್ಥಿತಿಯನ್ನು ಹೊಂದಿರುವ ಮತ್ತು ವರ್ಷಗಳಿಂದ ರಾಜ್ಯಗಳು ಮತ್ತು ದೇಶವನ್ನು ದಾರಿ ತಪ್ಪಿಸಿದ ಕಾರಣ ಅವರು ನಿರಂತರವಾಗಿ ಸೋಲು ಅನುಭವಿಸುತ್ತಿದ್ದಾರೆ.. ಎಲ್ಲರೂ(ವಿರೋಧ ಪಕ್ಷಗಳು) ಕೊಳಕು ತಂತ್ರಗಳನ್ನು ಬಳಸಿ ಒಟ್ಟಿಗೆ ಸೇರುವುದನ್ನು ನಾವು ನೋಡಿದ್ದೇವೆ ಎಂದು ವಾಗ್ದಾಳಿ ನಡೆಸಿದರು.