ನವದೆಹಲಿ: ಜನಪ್ರಿಯ ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲಹಾಬಾದಿಯಾ, ಹಾಸ್ಯನಟ ಸಮಯ್ ರೈನಾ ಮತ್ತು ಇತರರು ಇತ್ತೀಚೆಗೆ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಎಂಬ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪೋಷಕರು ಮತ್ತು ಲೈಂಗಿಕತೆ ಕುರಿತು ನೀಡಿದ್ದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಬಿಯಲ್ ಬೈಸೆಪ್ಸ್ ಹೆ ಎಂದೇ ಹೆಸರಾಗಿರುವ ರಣವೀರ್, ವಿಡಿಯೋ ಬಿಡುಗಡೆ ಮಾಡಿ ಕ್ಷಮೆಯಾಚಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮಂಗಳವಾರ ರಣವೀರ್ ಅಲಹಾಬಾದಿಯಾ ಮತ್ತು ಇತರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್, ಅಪೂರ್ವ ಮಖಿಜಾ, ರಣವೀರ್ ಅಲ್ಹಾಬಾದಿಯಾ, ಸಮಯ್ ರೈನಾ ಮತ್ತು ಇತರರ ವಿರುದ್ಧ ಅಸ್ಸಾಂ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆನ್‌ಲೈನ್ ಶೋನಲ್ಲಿ 'ಅಶ್ಲೀಲತೆಯನ್ನು ಉತ್ತೇಜಿಸುವ ಮತ್ತು ಅಸಭ್ಯ ಚರ್ಚೆಯಲ್ಲಿ ತೊಡಗಿದ್ದಾರೆ' ಎಂಬ ಆರೋಪದ ಮೇಲೆ ನಗರದ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ಅಲಹಾಬಾದಿಯಾ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ಈ ವಿಷಯ ಸಂಸತ್ತಿನಲ್ಲಿ ಪ್ರತಿಧ್ವನಿಸುವ ಸಾಧ್ಯತೆಯಿದ್ದು, ಹಲವಾರು ಸಂಸದರ ದೂರುಗಳ ನಂತರ ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯು ಅಲಹಾಬಾದಿಯಾ ಅವರನ್ನು ವಿಚಾರಣೆಗೆ ಕರೆಯಬೇಕೆ ಎಂಬ ಬಗ್ಗೆ ಚರ್ಚಿಸುತ್ತಿದೆ. ಪ್ಯಾನೆಲ್‌ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕೋರಿ ಪಾಡ್‌ಕ್ಯಾಸ್ಟರ್‌ಗೆ ನೋಟಿಸ್ ನೀಡಬಹುದು ಎಂದು NDTV ವರದಿ ಮಾಡಿದೆ.
ಎನ್‌ಡಿಟಿವಿ ಪ್ರಕಾರ, ಶಿವಸೇನೆಯ (ಯುಬಿಟಿ) ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಹಾಸ್ಯದ ಹೆಸರಿನಲ್ಲಿ ಯಾವುದೇ ನಿಂದನೀಯ ಭಾಷೆಯು ಸ್ವೀಕಾರಾರ್ಹವಲ್ಲ. ನಿಮಗೆ ವೇದಿಕೆಯೊಂದು ಸಿಗುವುದು ನೀವು ಏನು ಬೇಕಾದರೂ ಹೇಳಬಹುದು ಎಂದಲ್ಲ. ಅವರು ಲಕ್ಷಾಂತರ ಚಂದಾದಾರರನ್ನು ಹೊಂದಿರುವವರು. ಪ್ರತಿಯೊಬ್ಬ ರಾಜಕೀಯ ನಾಯಕರೂ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಪ್ರಶಸ್ತಿ ನೀಡಿದ್ದಾರೆ... ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸ್ಥಾಯಿ ಸಮಿತಿಯ ಸದಸ್ಯೆಯಾಗಿ ನಾನು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ' ಎಂದು ಹೇಳಿದ್ದಾರೆ.