ಇಂಫಾಲ: ಬಡುಕಟ್ಟು ಸಮುದಾಯಗಳ ಸಂಘರ್ಷದಿಂದ ತತ್ತರಿಸಿ ಹೋಗಿದ್ದ ಮಣಿಪುರದಲ್ಲಿ ಕ್ಷಿಪ್ರಕ್ರಾಂತಿಯಾಗಿದ್ದು, ಸಿಎಂ ಬಿರೇನ್ ಸಿಂಗ್ ರಾಜಿನಾಮೆ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದೆ.
ಹೌದು... ಕಳೆದ 2 ವರ್ಷಗಳಿಂದ ಬಿಗುವಿನ ವಾತಾವರಣದಲ್ಲಿ ದಿನ ದೂಡುತ್ತಿದ್ದ ಮಣಿಪುರದಲ್ಲಿ ಕೇಂದ್ರ ಸರ್ಕಾರ ಗುರುವಾರ ರಾಷ್ಟ್ರಪತಿ ಆಳ್ವಿಕೆ ಹೇರಿದೆ. ಕುಕಿ ಮತ್ತು ಮೈತೆಯ್ ಬುಡಕಟ್ಟು ಸಮುದಾಯಗಳ ಸಂಘರ್ಷ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಮಾಡಿವೆ.
ಗಲಭೆ ಬಳಿಕ ಮಣಿಪುರ ಮೇಲ್ನೋಟಕ್ಕೆ ಶಾಂತವಾಗಿದ್ದರೂ ಒಳಗೊಳಗೆ ಬೇಗುದಿಗಳು ಹಾಗೇ ಇದೆ. ಸಂಘರ್ಷದ ಬಳಿಕವೂ ಅಲ್ಲೊಂದು ಇಲ್ಲೊಂದು ಎಂಬಂತೆ ಹಿಂಸಾಚಾರ ಘಟನೆಗಳು ನಡೆಯುತ್ತಿದ್ದು, ಇದು ಮತ್ತೆ ಹಿಂಸಾಚಾರ ಭುಗಿಲೇಳುವ ಸೂಚನೆಗಳು ಎಂದು ಹೇಳಲಾಗಿತ್ತು.
ಮಣಿಪುರದಲ್ಲಿ ರಾಜಕೀಯ ಕ್ಷಿಪ್ರಕಾಂತ್ರಿ
ಇನ್ನು ಇದರ ನಡುವೆ ಮುಖ್ಯಮಂತ್ರಿ ಬಿರೆನ್ ಸಿಂಗ್ ವಿರುದ್ದ ಪಕ್ಷದೊಳಗೆ, ಎನ್‌ಡಿಎ ಮೈತ್ರಿ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಬೆಂಬಲ ವಾಪಸ್ ಪಡೆಯುವ ಎಚ್ಚರಿಕೆಯನ್ನೂ ನೀಡಿತ್ತು. ತಮ್ಮ ಸರ್ಕಾರ ಅವಿಶ್ವಾಸ ನಿರ್ಣಯ ಮತ್ತು ನಿರ್ಣಾಯಕ ಬಹುಮತ ಪರೀಕ್ಷೆಯನ್ನು ಎದುರಿಸುವ ಸಂಕಷ್ಟಕ್ಕೆ ತುತ್ತಾದ ಬೆನ್ನಲ್ಲೇ ಒಂದು ದಿನ ಮೊದಲು ಸಿಎಂ ಬಿರೇನ್ ಸಿಂಗ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಮಣಿಪುರದಲ್ಲಿ ಆಗಬಹುದಾಗಿದ್ದ ರಾಜಕೀಯ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ತಪ್ಪಿಸಿತು.
ತೀವ್ರ ಸಂಕಷ್ಟಕ್ಕೆ ಸಿಲುಕಿದ ಬಿರೇನ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿರೆನ್ ಸಿಂಗ್ ರಾಜೀನಾಮೆ ನೀಡಿ ಮೂರು ದಿನವಾದರೂ ಮತ್ತೊಬ್ಬ ಮುಖ್ಯಮಂತ್ರಿಯನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಸೂಚಿಸಿಲ್ಲ. ಇದರ ಪರಿಣಾಮ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಸಂವಿಧಾನದ 174(1) ನೇ ವಿಧಿಯ ಪ್ರಕಾರ, ರಾಜ್ಯ ವಿಧಾನಸಭೆಗಳು ತಮ್ಮ ಕೊನೆಯ ಅಧಿವೇಶನದ ಆರು ತಿಂಗಳೊಳಗೆ ಸಭೆ ಸೇರಬೇಕು. ಆದಾಗ್ಯೂ, ಕೊನೆಯ ವಿಧಾನಸಭೆ ಅಧಿವೇಶನವು ಆಗಸ್ಟ್ 12, 2024 ರಂದು ನಡೆದಿದ್ದು, ಇಂದು ಮುಂದಿನ ಅಧಿವೇಶನಕ್ಕೆ ಗಡುವು ವಿಧಿಸಲಾಗಿದೆ.
ಬಿರೇನ್ ಸಿಂಗ್ ಭಾನುವಾರ ರಾಜೀನಾಮೆ ನೀಡಿದ ನಂತರ, ಸೋಮವಾರ ಪ್ರಾರಂಭವಾಗಬೇಕಿದ್ದ ಮುಂಬರುವ ಬಜೆಟ್ ಅಧಿವೇಶನವನ್ನು ರಾಜ್ಯಪಾಲ ಅಜಯ್ ಭಲ್ಲಾ ರದ್ದುಗೊಳಿಸಿದ್ದಾರೆ.