ನವದೆಹಲಿ: ಆರೋಪಿಯನ್ನು ಜೈಲಿನಲ್ಲಿಡಲು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA)ಯನ್ನು ಬಳಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ ಮತ್ತು ವರದಕ್ಷಿಣೆ ಕಾನೂನಿನಂತೆ ಇದನ್ನು "ದುರುಪಯೋಗಪಡಿಸಿಕೊಳ್ಳಲಾಗುತ್ತಿದೆಯೇ"? ಎಂದು ಪ್ರಶ್ನಿಸಿದೆ.
ಛತ್ತೀಸ್‌ಗಢದ ಮಾಜಿ ಅಬಕಾರಿ ಅಧಿಕಾರಿ ಅರುಣ್ ಪಟಿ ತ್ರಿಪಾಠಿ ಅವರಿಗೆ ಜಾಮೀನು ನೀಡುವಾಗ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭೂಯಾನ್ ಅವರ ಪೀಠ ಬುಧವಾರ ಇಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ದೂರನ್ನು ಪರಿಗಣಿಸಿ ಛತ್ತೀಸ್‌ಗಢ ಹೈಕೋರ್ಟ್ ಪ್ರಕರಣ ರದ್ದುಗೊಳಿಸಿದರೂ ಆರೋಪಿಯನ್ನು ಹೇಗೆ ಬಂಧನದಲ್ಲಿಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.
"ಪಿಎಂಎಲ್‌ಎಯ ಪರಿಕಲ್ಪನೆಯು ಒಬ್ಬ ವ್ಯಕ್ತಿಯನ್ನು ಜೈಲಿನಲ್ಲಿಯೇ ಇಡಬೇಕು ಎಂದು ಹೇಳಲು ಸಾಧ್ಯವಿಲ್ಲ. ದೂರು ರದ್ದುಗೊಂಡ ನಂತರವೂ ವ್ಯಕ್ತಿಯನ್ನು ಜೈಲಿನಲ್ಲಿಡುವ ಪ್ರವೃತ್ತಿ ಇದ್ದರೆ, ಏನು ಹೇಳಬಹುದು? 498 ಎ (ವರದಕ್ಷಿಣೆ ಕಿರುಕುಳ ತಡೆ)ಪ್ರಕರಣಗಳಲ್ಲಿ ಏನಾಯಿತು ನೋಡಿ, ಪಿಎಂಎಲ್‌ಎ ಅನ್ನು ಸಹ ಹಾಗೆ ದರುಪಯೋಗಪಡಿಸಿಕೊಳ್ಳಲಾಗುತ್ತಿದೆಯೇ?" ಎಂದು ಪೀಠ ಪ್ರಶ್ನಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ವಿವಾಹಿತ ಮಹಿಳೆಯರನ್ನು ಅವರ ಗಂಡಂದಿರು ಮತ್ತು ಅವರ ಸಂಬಂಧಿಕರ ವರದಕ್ಷಿಣೆ ಕಿರುಕುಳದಿಂದ ರಕ್ಷಿಸುತ್ತದೆ.
ವಿಚಾರಣೆಯ ಸಮಯದಲ್ಲಿ, ಜಾರಿ ನಿರ್ದೇಶನಾಲಯ(ED) ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ SV ರಾಜು, ಜಾಮೀನು ನೀಡುವುದನ್ನು ವಿರೋಧಿಸಿದರು ಮತ್ತು ತಾಂತ್ರಿಕ ಆಧಾರದ ಮೇಲೆ ವಂಚಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಅನುಮತಿ ಇಲ್ಲದ ಕಾರಣ ದೂರು ರದ್ದುಗೊಂಡಿದೆ ಮತ್ತು ಜಾಮೀನಿಗೆ ಅದು ಅಪ್ರಸ್ತುತ ಎಂದು ರಾಜು ವಾದಿಸಿದರು.
"ಪ್ರಕರಣ ರದ್ದುಗೊಂಡಿದೆ ಎಂದು ಜಾರಿ ನಿರ್ದೇಶನಾಲಯಕ್ಕೆ ತಿಳಿದಿದ್ದರೂ, ಅದನ್ನು ನಿಗ್ರಹಿಸಲಾಗಿದೆ ಎಂಬುದು ಆಘಾತಕಾರಿ. ನಾವು ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಬೇಕು. ಜಾರಿ ನಿರ್ದೇಶನಾಲಯ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ನಾವು ಯಾವ ರೀತಿಯ ಸೂಚನೆಗಳನ್ನು ನೀಡುತ್ತಿದ್ದೇವೆ?" ಎಂದು ಸುಪ್ರೀಂ ಕೋರ್ಟ್ ಕಿಡಿ ಕಾರಿದೆ.
ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಹೈಕೋರ್ಟ್ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಭಾರತೀಯ ದೂರಸಂಪರ್ಕ ಸೇವೆಗಳ ಅಧಿಕಾರಿ ತ್ರಿಪಾಠಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.