ನವದೆಹಲಿ: ಹಾಸ್ಯನಟ ಸಮಯ್ ರೈನಾ ಅವರ ಯೂಟ್ಯೂಬ್ ರಿಯಾಲಿಟಿ ಶೋನಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ವಿಚಾರವಾಗಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ವಿರುದ್ಧ ರಣವೀರ್ ಅಲ್ಹಾಬಾದಿಯಾ ಅವರು ಶುಕ್ರವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಅಲ್ಹಾಬಾದಿಯಾ ಪರ ವಕೀಲ ಅಭಿನವ್ ಚಂದ್ರಚೂಡ್ ಅವರ ಅರ್ಜಿಯನ್ನು ಗಮನಿಸಿತು. ಮುಂದಿನ ಎರಡ್ಮೂರು ದಿನಗಳಲ್ಲಿ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿತು.
ಅಸ್ಸಾಂ ಪೊಲೀಸರು ವಿಚಾರಣೆಗಾಗಿ ಅಲ್ಹಾಬಾದಿಯಾ ಅವರಿಗೆ ಇಂದು ಸಮನ್ಸ್ ನೀಡಿದ್ದು, ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಚಂದ್ರಚೂಡ್ ನ್ಯಾಯಾಲಯವನ್ನು ಕೋರಿದರು.
ಹಾಸ್ಯನಟ ಸಮಯ್ ರೈನಾ ಅವರ ಯೂಟ್ಯೂಬ್ ಶೋ 'ಇಂಡಿಯಾಸ್ ಗಾಟ್ ಲ್ಯಾಟೆಂಟ್'ನಲ್ಲಿ ಪೋಷಕರು ಮತ್ತು ಲೈಂಗಿಕತೆಯ ಕುರಿತು ಪಾಡ್‌ಕಾಸ್ಟರ್ ಅಲ್ಹಾಬಾದಿಯಾ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಈ ವಿಡಿಯೋ ಕ್ಲಿಪ್ ವೈರಲ್ ಆಗುತ್ತಲೇ ವಿವಾದ ಭುಗಿಲೆದ್ದಿತ್ತು. ದೇಶದ ವಿವಿಧ ಭಾಗಗಳಲ್ಲಿ ಅವರ ಮತ್ತು ಇತರರ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.