ನವದೆಹಲಿ: ರಾಷ್ಟ್ರ ರಾಜಧಾನಿಯ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಭಾನುವಾರ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ, ವೈಷ್ಣವ್ ರಾಜೀನಾಮೆ ನೀಡದಿದ್ದರೆ, ರೈಲು ನಿಲ್ದಾಣದಲ್ಲಿ ದುರಾವಸ್ಥೆಯಿಂದಾಗಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಎಷ್ಟು ಜನರು ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಪ್ರತಿ ಗಂಟೆಗೆ 1500 ಟಿಕೆಟ್‌ಗಳು ಮಾರಾಟವಾಗುತ್ತಿವೆ ಎಂಬುದು ರೈಲ್ವೆ ಅಧಿಕಾರಿಗಳಿಗೆ ಚೆನ್ನಾಗಿ ತಿಳಿದಿತ್ತು. ಜನಸಂದಣಿ ನಿರ್ವಹಣೆಗೆ ಸರಿಯಾದ ವ್ಯವಸ್ಥೆ ಮಾಡಬೇಕಿತ್ತು. ದುರದೃಷ್ಟವಶಾತ್, ಯಾವುದೇ ಭದ್ರತಾ ಪಡೆಗಳು ಕಾಣಿಸಲಿಲ್ಲ. ಜನರೇ ಸ್ವತ: ನಿರ್ವಹಣೆ ಮಾಡಿಕೊಳ್ಳಬೇಕಾಗಿತ್ತು. ಇದು ಇಂತಹ ದುರಂತಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು.
ದೇಶದಲ್ಲಿ ಎರಡು ಹಿಂದೂಸ್ಥಾನಗಳಿವೆ ಎಂದು ಆರೋಪಿಸಿದ ಅವರು, ಒಂದು ಕಡೆ ರಾಜನು ತನ್ನ ಸ್ನೇಹಿತರು ಕುಂಭದಲ್ಲಿ ಸ್ನಾನ ಮಾಡಲು ನೆರವಾಗುತ್ತಾನೆ. ಆದರೆ ಸಾಮಾನ್ಯ ಜನರು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಸಾಯುತ್ತಾರೆ ಎಂದು ಹೇಳುವ ಮೂಲಕ ಕುಂಭ ಮೇಳದಲ್ಲಿನ ವಿಐಪಿ ಸಂಸ್ಕೃತಿಯನ್ನೂ ಅವರು ಟೀಕಿಸಿದರು.
ನಿನ್ನೆ ನಡೆದ ಹತ್ಯಾಕಾಂಡ ಘಟನೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಸಚಿವರಿಗೆ ಒಂದು ನಿಮಿಷವೂ ತಮ್ಮ ಸ್ಥಾನದಲ್ಲಿರಲು ಅರ್ಹತೆ ಇಲ್ಲ, ಘಟನೆಯ ನೈತಿಕ ಹೊಣೆ ಹೊತ್ತು ರೈಲ್ವೇ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ರೈಲ್ವೆ ಸಚಿವರು ತಮ್ಮ ಜವಾಬ್ದಾರಿಯಲ್ಲಿ ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಮತ್ತು ಕೇವಲ ರೀಲ್ ಗಳನ್ನು ಸೃಷ್ಟಿಸುತ್ತಿದ್ದು, ಸಾವುಗಳ ಸಂಖ್ಯೆಯನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ.
ಅಶ್ವಿನಿ ವೈಷ್ಣವ್ ಅವರಿಗೆ ಕುರ್ಚಿಯಲ್ಲಿ ಒಂದು ನಿಮಿಷವೂ ಇರುವ ನೈತಿಕ ಹಕ್ಕು ಇಲ್ಲ. ಅವರು ನಾಚಿಕೆಯಿಲ್ಲದೆ ಕುರ್ಚಿಗೆ ಅಂಟಿಕೊಂಡಿದ್ದಾರೆ ಎಂದು ಅವರು ಹೇಳಿದರು.