ಡೆಹ್ರಾಡೂನ್: ಉತ್ತರಾಖಂಡ್ ನ ಕಾಶಿಪುರದ ಸೈನಿಕ್ ಕಾಲೋನಿಯಲ್ಲಿ 170 ಕಿಲೋಗ್ರಾಂಗಳಷ್ಟು ತೂಕ ಮತ್ತು ಸುಮಾರು 20 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ಕಾಣಿಸಿಕೊಂಡು ಜನರಲ್ಲಿ ಭಯ ಉಂಟಾಗಿತ್ತು.
ಇದನ್ನು ಕಂಡು ಗಾಬರಿಗೊಂಡ ಸ್ಥಳೀಯರು ತಕ್ಷಣ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ತಂಡ ತ್ವರಿತವಾಗಿ ಆಗಮಿಸಿ ಮೂರು ಗಂಟೆಗಳ ತೀವ್ರ ಪ್ರಯತ್ನದ ನಂತರ ಹೆಬ್ಬಾವನ್ನು ಯಶಸ್ವಿಯಾಗಿ ಸೆರೆಹಿಡಿದಿದೆ. "ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಸಮುದಾಯದ ತ್ವರಿತ ಕ್ರಮ ಅತ್ಯಂತ ನಿರ್ಣಾಯಕವಾಗಿತ್ತು" ಎಂದು ಅರಣ್ಯ ಇಲಾಖೆಯ ವಕ್ತಾರರು ಹೇಳಿದ್ದಾರೆ.
"ಅದರ ಶಕ್ತಿ ಮತ್ತು ವೇಗದಿಂದ, ಹೆಬ್ಬಾವು ಯಾವುದೇ ಕಾಡು ಪ್ರಾಣಿ ಅಥವಾ ಮಾನವರ ಮೇಲೆ ದಾಳಿ ಮಾಡುವ ಸಾಧ್ಯತೆ ಇತ್ತು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಇಲಾಖೆಯ ತಂಡ ಅದನ್ನು ಸಮಯಕ್ಕೆ ಸರಿಯಾಗಿ ಸೆರೆಹಿಡಿಯದಿದ್ದರೆ, ಅದು ದೊಡ್ಡ ಘಟನೆಗೆ ಕಾರಣವಾಗಬಹುದಿತ್ತು" ಎಂದು ಅಧಿಕಾರಿ ಹೇಳಿದ್ದಾರೆ.
"ಈ ಹೆಬ್ಬಾವು ಅಪಾಯಕಾರಿ ಶಕ್ತಿಯನ್ನು ಹೊಂದಿದ್ದರಿಂದ ಅದನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗಿತ್ತು. ನಾವು ಅದನ್ನು ತಡೆಯಲು ಸಾಧ್ಯವಾಗದಿದ್ದರೆ, ಅದು ಯಾರಿಗಾದರೂ ಮಾರಕವಾಗಬಹುದಿತ್ತು," ಎಂದು ಅರಣ್ಯ ಇಲಾಖೆಯ ರಕ್ಷಕ ಮೊಹಮ್ಮದ್ ತಾಲಿಬ್ ಹೇಳಿದ್ದಾರೆ.
ಅನುಭವಿ ಹಾವು ರಕ್ಷಕ ತಾಲಿಬ್ ಮಾತನಾಡಿದ್ದು "ಈ ಕಾರ್ಯಾಚರಣೆ ನಮಗೆ ಸಾವು ಬದುಕಿನ ವಿಷಯವಾಗಿತ್ತು. ಒಂದು ದೈತ್ಯ ಹೆಬ್ಬಾವು ನಿಮ್ಮ ಮುಂದೆ ಇರುವಾಗ, ಅದರ ಶಕ್ತಿ ಮತ್ತು ಬಿಗಿಯಾದ ಹಿಡಿತದ ವಿರುದ್ಧ ಯಾವುದೇ ವ್ಯಕ್ತಿ ಎಷ್ಟು ಅಸಹಾಯಕನಾಗಿರುತ್ತಾನೆ ಎಂಬುದನ್ನು ಊಹಿಸಿ." ಎಂದು ತಮ್ಮ ಆತಂಕವನ್ನು ವಿವರಿಸಿದ್ದಾರೆ.
ವಯಸ್ಕ ಹೆಬ್ಬಾವಿನ ಗಾತ್ರದ ಬಗ್ಗೆ ವನ್ಯಜೀವಿ ಇಲಾಖೆಯ ಅಧಿಕಾರಿಯೊಬ್ಬರು ವಿವರಗಳನ್ನು ನೀಡಿದ್ದಾರೆ. "ಉತ್ತಮವಾಗಿ ಬೆಳೆದಿರುವ ಹೆಬ್ಬಾವಿನ ಗರಿಷ್ಠ ತೂಕ ಅದರಲ್ಲಿನ ಪ್ರಭೇದಗಳನ್ನು ಅವಲಂಬಿಸಿ ಬದಲಾಗಬಹುದು. ಕೆಲವು ದೊಡ್ಡ ಹೆಬ್ಬಾವು ಪ್ರಭೇದಗಳಲ್ಲಿ, ರೆಟಿಕ್ಯುಲೇಟೆಡ್ ಹೆಬ್ಬಾವು 159 ಕೆಜಿ ವರೆಗೆ ತೂಗುತ್ತದೆ, ಆದರೆ ಬರ್ಮೀಸ್ ಹೆಬ್ಬಾವು ಮತ್ತು ಭಾರತೀಯ ಹೆಬ್ಬಾವು ಎರಡೂ ಸಾಮಾನ್ಯವಾಗಿ ತಲಾ 91 ಕೆಜಿ ತೂಗುತ್ತವೆ ಎಂದು ಹೇಳಿದ್ದಾರೆ.
ಯಶಸ್ವಿ ರಕ್ಷಣಾ ಕಾರ್ಯಾಚರಣೆಯಿಂದ, ದೈತ್ಯ ಸರ್ಪವನ್ನು ತಮ್ಮ ಪ್ರದೇಶದಿಂದ ಸುರಕ್ಷಿತವಾಗಿ ತೆಗೆದುಹಾಕಲಾಗಿದೆ ಎಂದು ಕಾಶಿಪುರ ನಿವಾಸಿಗಳು ಈಗ ನಿರಾಳವಾಗಿದ್ದಾರೆ.