ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ರೇಖಾ ಗುಪ್ತಾ ವಿವಾದವೊಂದಕ್ಕೆ ಗುರಿಯಾಗಿದ್ದಾರೆ.
ಫೆ.20 ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೇಖಾ ಗುಪ್ತ ದೆಹಲಿಯ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.
ರೇಖಾ ಗುಪ್ತಾ ಸಿಎಂ ಆಗುತ್ತಿದ್ದಂತೆಯೇ ಅವರ ಅಭಿಮಾನಿಗಳೇ ಅವರಿಗೆ ಮುಳುವಾಗಿದ್ದು, ಗುಪ್ತಾ ಅವರ ಹಳೆಯ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಚುನಾವಣೆಯ ಸೋಲನ್ನು ಟೀಕಿಸುವುದಕ್ಕಾಗಿ ಅಭಿಮಾನಿಗಳು ರೇಖಾ ಗುಪ್ತಾ ಅವರ ಹಳೆಯ ಪೋಸ್ಟ್ ಗಳನ್ನು ಹಂಚಿಕೊಳ್ಳತೊಡಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಳೆಯ ಪೋಸ್ಟ್ ನಲ್ಲಿ ರೇಖಾ ಗುಪ್ತಾ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸುವ ಧಾವಂತದಲ್ಲಿ ಅನುಚಿತ ಭಾಷೆ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
'ದಿ ಆಟಮ್' ಎಂಬ ಯೂಟ್ಯೂಬ್ ಚಾನೆಲ್ ನ್ನು ನಡೆಸುತ್ತಿರುವ ಯೂಟ್ಯೂಬರ್ ತುಷಾರ್ ಗುಪ್ತಾ, 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದು, ಗುಪ್ತಾ ಅವರ ಹಳೆಯ ಪೋಸ್ಟ್‌ಗಳನ್ನು 'ದ್ವೇಷಿಗಳು' ಮತ್ತೆ ಮತ್ತೆ ಹೆಕ್ಕಿ ತೆಗೆದು ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
"ದೆಹಲಿಯ ಹೊಸ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಹಳೆಯ ಟ್ವೀಟ್‌ಗಳನ್ನು ಜನರು ದ್ವೇಷಿಸುತ್ತಿದ್ದಾರೆ. ಅವರಿಗೆ ಭಾಷೆಯ ಬಗ್ಗೆ ಕಾಳಜಿ ಇಲ್ಲ, ಯಾರೋ ಅರವಿಂದ್ ಕೇಜ್ರಿವಾಲ್ ಮತ್ತು ಕಂಪನಿಗೆ ಅವರಿಗೆ ಚೆನ್ನಾಗಿ ಅರ್ಥವಾಗುವ ಭಾಷೆಯಲ್ಲಿ ಉತ್ತರಿಸುತ್ತಿರುವುದನ್ನು ಅವರು ದ್ವೇಷಿಸುತ್ತಾರೆ" ಎಂದು ಯೂಟ್ಯೂಬರ್ ಹೇಳಿದ್ದಾರೆ.
ಕೆಲವು ಎಎಪಿ ಬೆಂಬಲಿಗರು ಕೇಜ್ರಿವಾಲ್ ಅವರನ್ನು ಟೀಕಿಸುವ ಗುಪ್ತಾ ಅವರ ಹಳೆಯ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಮೀಮ್‌ಗಳೊಂದಿಗೆ ಹಂಚಿಕೊಂಡಿದ್ದಾರೆ, ಅವುಗಳನ್ನು ಈಗ ಅಳಿಸಲಾಗಿದೆ. ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್, ಗುಪ್ತಾ ಅವರ ಹಳೆಯ ಟ್ವೀಟ್‌ಗಳ ಬಗ್ಗೆ ಪೋಸ್ಟ್ ಮಾಡಿದ ವಿರೋಧ ಪಕ್ಷದ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ.
"ದೆಹಲಿಯ ಹೊಸ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಹಿಂದಿನ ನಿಂದನೀಯ ಭಾಷೆ ಮತ್ತು ಗದ್ದಲದ ಬಗ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ವೈರಲ್ ಆಗತೊಡಗಿವೆ. ಕಠಿಣ ಪರಿಶ್ರಮಿ ಮತ್ತು ಉತ್ತಮವಾಗಿ ಮಾತನಾಡುತ್ತಿದ್ದ ಶೀಲಾ ದೀಕ್ಷಿತ್ ಮತ್ತು ಸ್ಪಷ್ಟ ಸಂಸದೀಯ ನಡೆ ಹೊಂದಿದ್ದ ಸುಷ್ಮಾ ಸ್ವರಾಜ್‌ಗಿಂತ ರೇಖಾ ತುಂಬಾ ದೂರವಿದ್ದಾರೆ. ಆದರೆ ಇದು 'ಹೊಸ' ಬಿಜೆಪಿಯಾಗಿದ್ದು, ಅಲ್ಲಿ ಕ್ರೂರ ನಿಂದನೆ ಮತ್ತು ಕಟುವಾದವನ್ನು ಸಾಮಾನ್ಯ ಎಂಬಂತೆ ನೋಡಲಾಗುತ್ತದೆ" ಎಂದು ಘೋಷ್ ಆರೋಪಿಸಿದ್ದಾರೆ.
"ಭ್ರಷ್ಟ ಮಂತ್ರಿಗಳ ವಿರುದ್ಧ ಕ್ರಿಯಾತ್ಮಕ ಭಾಷೆಯನ್ನು ಸರಿಯಾಗಿ ಬಳಸಲಾಗಿದೆ. ಮತ್ತು ಈ ದೃಷ್ಟಿಯಿಂದ, ರೇಖಾ ಬಳಸಿರುವ ಭಾಷೆ 'ಹಂಬಾ ಹಂಬಾ, ಬಂಬಾ ಬಂಬಾ, ಖಂಬಾ ಖಂಬಾ' ಗಿಂತ ಉತ್ತಮವಾಗಿ ಧ್ವನಿಸುತ್ತದೆ" ಎಂದು X ಬಳಕೆದಾರರೊಬ್ಬರು ಈ ಹಿಂದೆ ವೈರಲ್ ಆಗಿದ್ದ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಉಲ್ಲೇಖಿಸಿ ತೃಣಮೂಲ ಸಂಸದರಿಗೆ ತಿರುಗೇಟು ನೀಡಿದ್ದಾರೆ.