ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (NEP-2020)ಗೆ ವಿರೋಧ ವ್ಯಕ್ತಪಡಿಸುವ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಮಿಳು ನಾಡು ಸರ್ಕಾರ ಎನ್ ಇಪಿ-2020ನ್ನು ಸಂಕುಚಿತ ದೃಷ್ಟಿಯಿಂದ ನೋಡುತ್ತಿದೆ. ರಾಜಕೀಯವಾಗಿ ನೋಡುವುದನ್ನು ಬಿಟ್ಟು ಸರ್ಕಾರ ಯೋಜನೆಯ ಪ್ರಗತಿಶೀಲ ಸುಧಾರಣೆಗಳನ್ನು ವಿಶಾಲ ಮನೋಭಾವದಿಂದ ಕಾಣಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಉದ್ದೇಶಿಸಿ ಬರೆದ ಮೂರು ಪುಟಗಳ ಪತ್ರದಲ್ಲಿ, ಪ್ರಧಾನ್ ಅವರು "ಯಾವುದೇ ರಾಜ್ಯ ಅಥವಾ ಸಮುದಾಯದ ಮೇಲೆ ಯಾವುದೇ ಭಾಷೆಯನ್ನು ಹೇರುವ ಪ್ರಶ್ನೆಯೇ ಇಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
NEP 2020 ಭಾಷಾ ಸ್ವಾತಂತ್ರ್ಯದ ತತ್ವವನ್ನು ಎತ್ತಿಹಿಡಿಯುತ್ತದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ನೀಡುತ್ತದೆ. ವಾಸ್ತವವಾಗಿ, ನೀತಿಯ ಪ್ರಮುಖ ಉದ್ದೇಶಗಳಲ್ಲಿ ಒಂದು, ದಶಕಗಳಿಂದ ಔಪಚಾರಿಕ ಶಿಕ್ಷಣದಲ್ಲಿ ಕ್ರಮೇಣ ಬದಿಗಿಡಲ್ಪಟ್ಟಿರುವ ತಮಿಳು ಸೇರಿದಂತೆ ಭಾರತೀಯ ಭಾಷೆಗಳ ಬೋಧನೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಬಲಪಡಿಸುವುದಾಗಿದೆ ಎಂದು ವಿವರಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರಕ್ಕೆ ಧರ್ಮೇಂದ್ರ ಪ್ರಧಾನ್ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೇಂದ್ರ ಪ್ರಾಯೋಜಿತ ಎರಡು ಉಪಕ್ರಮಗಳಾದ ಸಮಗ್ರ ಶಿಕ್ಷಾ ಅಭಿಯಾನ (SSA) ಮತ್ತು ಪಿಎಂಶ್ರೀ ಶಾಲೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ಜೋಡಿಸಲು ಆಕ್ಷೇಪ ವ್ಯಕ್ತಪಡಿಸಿದ್ದರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೂಲಭೂತವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದರು.
ಪ್ರಧಾನಿಯವರಿಗೆ ನೀವು ಬರೆದಿರುವ ಪತ್ರವು ಮೋದಿ ಸರ್ಕಾರವು ಉತ್ತೇಜಿಸುವ ಸಹಕಾರಿ ಒಕ್ಕೂಟದ ಮನೋಭಾವದ ಸಂಪೂರ್ಣ ನಿರಾಕರಣೆಯಾಗಿದೆ. NEP 2020 ನ್ನು ಸಂಕುಚಿತ ದೃಷ್ಟಿಯಿಂದ ನೋಡುವುದು ಮತ್ತು ಪ್ರಗತಿಪರ ಶೈಕ್ಷಣಿಕ ಸುಧಾರಣೆಗಳನ್ನು ತಮ್ಮ ರಾಜಕೀಯ ಅಜೆಂಡಾಗಳನ್ನು ಉಳಿಸಿಕೊಳ್ಳಲು ಬೆದರಿಕೆಗಳಾಗಿ ಪರಿವರ್ತಿಸುವುದು ಸೂಕ್ತವಲ್ಲ ಎಂದು ಪ್ರಧಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಕಾರಣಗಳಿಗಾಗಿ NEP 2020 ಗೆ ನಿರಂತರ ವಿರೋಧವು ತಮಿಳುನಾಡಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಿಗುವ ಅಪಾರ ಅವಕಾಶಗಳು ಮತ್ತು ಸಂಪನ್ಮೂಲಗಳನ್ನು ಕಸಿದುಕೊಳ್ಳುತ್ತದೆ. ನೀತಿಯನ್ನು ಪ್ರತಿಯೊಬ್ಬರಿಗೂ ಸೂಕ್ತವಾಗುವಂತೆ ನಿರೂಪಿಸಲಾಗಿದೆ, ರಾಜ್ಯಗಳು ತಮ್ಮ ವಿಶಿಷ್ಟ ಶೈಕ್ಷಣಿಕ ಅಗತ್ಯಗಳಿಗೆ ಅನುಗುಣವಾಗಿ ಅನುಷ್ಠಾನಕ್ಕೆ ತರಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಸಮಗ್ರ ಶಿಕ್ಷಣದಂತಹ ಕೇಂದ್ರೀಕೃತ ಬೆಂಬಲಿತ ಕಾರ್ಯಕ್ರಮಗಳು NEP 2020 ನೊಂದಿಗೆ ಹೊಂದಿಕೆಯಾಗುತ್ತವೆ ಮತ್ತು "ಪಿಎಂ ಶ್ರೀ ಶಾಲೆಗಳನ್ನು NEP ಮಾದರಿ ಶಾಲೆಗಳೆಂದು ಕಲ್ಪಿಸಲಾಗಿದೆ ಎಂದು ಒತ್ತಿ ಹೇಳಿದರು.
ತ್ರಿಭಾಷಾ ಸೂತ್ರಕ್ಕೆ ತಮಿಳು ನಾಡು ವಿರೋಧ
ತ್ರಿಭಾಷಾ ಸೂತ್ರಕ್ಕೆ ತಮಿಳುನಾಡಿನ ವಿರೋಧದ ಕುರಿತು ಪ್ರಸ್ತಾಪಿಸಿರುವ ಧರ್ಮೇಂದ್ರ ಪ್ರಧಾನ್, ರಾಷ್ಟ್ರೀಯ ಶಿಕ್ಷಣ ನೀತಿಯು ಯಾವುದೇ ಭಾಷೆಯನ್ನು ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಅನೇಕ ಬಿಜೆಪಿಯೇತರ ರಾಜ್ಯಗಳು NEP ಯ ಪ್ರಗತಿಪರ ನೀತಿಗಳನ್ನು ಜಾರಿಗೆ ತಂದಿವೆ. NEP 2020 ಪರಿಧಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ, ಆದ್ದರಿಂದ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ, ನಮ್ಮ ಭವಿಷ್ಯದ ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಷಯವನ್ನು ಸಮಗ್ರವಾಗಿ ಪರಿಶೀಲಿಸಬೇಕೆಂದು ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಒತ್ತಾಯಿಸಿದ್ದಾರೆ.
ಭಾಷಾ ಪರಂಪರೆಯ ಮಹತ್ವವನ್ನು ಎತ್ತಿ ತೋರಿಸಿದ ಪ್ರಧಾನ್, NEP-2020 ರ ಕೇಂದ್ರ ಸ್ತಂಭವೆಂದರೆ ಅದು ಭಾರತದ ಶ್ರೀಮಂತ ಭಾಷಾ ಪರಂಪರೆಗೆ ಆಳವಾದ ಮತ್ತು ಅಚಲವಾದ ಗೌರವ ಎಂದು ಪ್ರತಿಪಾದಿಸಿದರು. ಈ ನೀತಿಯು ಪ್ರತಿಯೊಬ್ಬ ವಿದ್ಯಾರ್ಥಿಗೂ ತಮ್ಮ ಮಾತೃಭಾಷೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅವಕಾಶವನ್ನು ಖಾತ್ರಿಪಡಿಸುತ್ತದೆ, ತಮಿಳು ಕೇವಲ ಪ್ರಾದೇಶಿಕ ಗುರುತಲ್ಲ ಅದು ರಾಷ್ಟ್ರೀಯ ಸಂಪತ್ತು ಎಂಬ ಅಂಶವನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.
NEP-2020 ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ತಮಿಳುನಾಡು ಸರ್ಕಾರ ನಡುವಿನ ಬಿಸಿ ಚರ್ಚೆಯ ಮಧ್ಯೆ ಈ ಪತ್ರ ಬರೆದಿದ್ದಾರೆ.
ದ್ವಿಭಾಷಾ ಸೂತ್ರ
ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಕೇಂದ್ರ ಶಿಕ್ಷಣ ಸಚಿವರ ವಿರುದ್ಧ ವಾಗ್ದಾಳಿ ನಡೆಸಿ, ರಾಜ್ಯವು ದ್ವಿಭಾಷಾ ನೀತಿಯನ್ನು ಮಾತ್ರ ಅನುಸರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ. ರಾಜ್ಯವು ಪಾವತಿಸುವ ತೆರಿಗೆಯಿಂದ ಕೇಂದ್ರದಿಂದ ತನ್ನ ಪಾಲು ಹಣವನ್ನು ಮಾತ್ರ ಪಡೆಯಲು ಬಯಸುತ್ತಿದೆ ಎಂದಿದ್ದಾರೆ.
ನಾವು ನಮ್ಮ ಪಾಲಿನ ಹಣವನ್ನು ಸುಮಾರು 2150 ಕೋಟಿ ರೂಪಾಯಿಗಳನ್ನು ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರ ಎನ್‌ಇಪಿ ಮತ್ತು ತ್ರಿಭಾಷಾ ನೀತಿಯನ್ನು ಒಪ್ಪಿಕೊಳ್ಳಬೇಕೆಂದು ಬಯಸುತ್ತದೆ. ತಮಿಳುನಾಡು ಯಾವಾಗಲೂ ತ್ರಿಭಾಷಾ ನೀತಿಯನ್ನು ವಿರೋಧಿಸುತ್ತಿದೆ, ಇದರಲ್ಲಿ ರಾಜಕೀಯ ಮಾಡಲು ಏನಿದೆ ಎಂದು ತಿರುಗೇಟು ನೀಡಿದ್ದಾರೆ.
ತಮಿಳು ನಮ್ಮ ಹಕ್ಕು, ಯಾರು ರಾಜಕೀಯ ಮಾಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಉದಯ ನಿಧಿ ಸ್ಟಾಲಿನ್ ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.