ಮುಂಬಯಿ: ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ಅವರು ಬೆಲ್ ಪಾಲ್ಸಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕಾಯಿಲೆಯಿಂದಾಗಿ ಅವರು ಮಾತನಾಡಲು ಕಷ್ಟ ಪಡುತ್ತಿದ್ದಾರೆ.
ಇದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಮುಖದ ಮೇಲೆ ಪಾರ್ಶ್ವವಾಯು ಉಂಟಾಗುತ್ತದೆ. ಈ ಕಾಯಿಲೆ ಬಂದವರ ಮುಖದ ಸ್ನಾಯುಗಳು ದುರ್ಬಲವಾಗುತ್ತದೆ. ಇದ್ದಕ್ಕಿದ್ದಂತೆ ಸಂಭವಿಸುತ್ತದೆ, ಸಾಮಾನ್ಯವಾಗಿ ದೇಹದ ಒಂದು ಭಾಗದಲ್ಲಿ ಕಂಡುಬರುತ್ತದೆ.
ಎರಡು ನಿಮಿಷಗಳಿಗಿಂತ ಹೆಚ್ಚು ಕಾಲ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಅವರು ಸಂಪುಟ ಸಭೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಡ್ಡಿಯಾಗುತ್ತದೆ ಎಂದು ಧನಂಜಯ್ ಮುಂಡೆ ಅವರು ಸಾಮಾಜಿಕ ಮಾಧ್ಯಮದ ಮೂಲಕ ಜನರಿಗೆ ತಿಳಿಸಿದ್ದಾರೆ.
ಬೆಲ್ ಪಾಲ್ಸಿ ಒಂದು ತಾತ್ಕಾಲಿಕ ಆದರೆ ಅಪಾಯಕಾರಿ ಸ್ಥಿತಿಯಾಗಿದ್ದು, ಇದು ಮುಖ ಜೋಲು ಬೀಳುವಂತೆ ಮಾಡುತ್ತದೆ ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಕಷ್ಟವಾಗುತ್ತದೆ. ಬೆಲ್ ಪಾಲ್ಸಿ ಎಂದರೆ ಮುಖದ ಸ್ನಾಯುಗಳಲ್ಲಿ ಉಂಟಾಗುವ ಹಠಾತ್ ದೌರ್ಬಲ್ಯ, ಇದು ಹೆಚ್ಚಾಗಿ ಮುಖದ ಒಂದು ಬದಿಗೆ ಪರಿಣಾಮ ಬೀರುತ್ತದೆ. ಇದು ಸ್ನಾಯು ಚಲನೆಯನ್ನು ನಿಯಂತ್ರಿಸುವ ಮುಖದ ನರಗಳ ಉರಿಯೂತದಿಂದ ಉಂಟಾಗುತ್ತದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಲಾಜಿಕಲ್ ಡಿಸಾರ್ಡರ್ಸ್ ಆ್ಯಂಡ್ ಸ್ಟ್ರೋಕ್ ಪ್ರಕಾರ, ಬೆಲ್ ಪಾಲ್ಸಿ ಅಮೆರಿಕದಲ್ಲಿ ಪ್ರತಿ ವರ್ಷ ಸುಮಾರು 40,000 ಜನರ ಮೇಲೆ ಪರಿಣಾಮ ಬೀರುತ್ತದೆ. ಬೆಲ್ ಪಾಲ್ಸಿಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ, ಆದರೆ ಇದು ವೈರಲ್ ಸೋಂಕುಗಳು, ದುರ್ಬಲ ರೋಗನಿರೋಧಕ ಶಕ್ತಿ, ನರಮಂಡಲದ ಸಮಸ್ಯೆಗಳಿಂದ ಹಿಡಿದು ಯಾವುದಾದರೂ ಕಾರಣದಿಂದ ಉಂಟಾಗಬಹುದು. ಮಧುಮೇಹ ರೋಗಿಗಳು ಮತ್ತು ಆಸ್ತಮಾ ರೋಗಿಗಳು ಸಹ ಬೆಲ್ ಪಾಲ್ಸಿಯಿಂದ ಬಳಲಬಹುದು.
ಹದಿನೈದು ದಿನಗಳ ಹಿಂದೆ ತಮ್ಮ ಎರಡೂ ಕಣ್ಣುಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಗಿ ಹೇಳಿದ್ದಾರೆ, ಡಾ. ಟಿ.ಪಿ. ಲಹಾನೆ ಅವರ ಮಾರ್ಗದರ್ಶನದಲ್ಲಿ ಶಸ್ತ್ರಚಿಕಿತ್ಸೆ ಪಡೆದೆ, ಸುಮಾರು ಹತ್ತು ದಿನಗಳ ಕಾಲ, ಅವರು ನನ್ನ ಕಣ್ಣುಗಳನ್ನು, ವಿಶೇಷವಾಗಿ ಬಲವಾದ ಬೆಳಕು, ಧೂಳು ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಲಹೆ ನೀಡಿದರು ಇದರ ನಡುವೆ ಬೆಲ್ ಪಾಲ್ಸಿ ಕಾಯಿಲೆ ಇರುವುದು ತಿಳಿದುಬಂದಿದೆ ಎಂದು ಧನಂಜಯ್ ಹೇಳಿದ್ದಾರೆ.
ಸರಪಂಚ್ ಪ್ರಕರಣದೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಮುಂಡೆ ಸಮರ್ಥಿಸಿಕೊಂಡಿದ್ದಾರೆ ಮತ್ತು ಈ ಹಿಂದೆ ಕೃಷಿ ಸಚಿವರಾಗಿದ್ದಾಗ ನಡೆದ ಅಕ್ರಮಗಳ ಆರೋಪಗಳನ್ನು ಸಹ ನಿರಾಕರಿಸಿದ್ದಾರೆ.