ಲಖನೌ: 121 ಜನರನ್ನು ಬಲಿ ಪಡೆದಿದ್ದ ಹತ್ರಾಸ್ ಕಾಲ್ತುಳಿತ ಪ್ರಕರಣದ ತನಿಖೆ ನಡೆಸಿದ ನ್ಯಾಯಾಂಗ ಆಯೋಗ, ಸತ್ಸಂಗ ನಡೆಸಿದ್ದ ಸ್ವಯಂ ಘೋಷಿತ ದೇವ ಮಾನವ ಭೋಲೆ ಬಾಬಾಗೆ ಕ್ಲೀನ್ ಚಿಟ್ ನೀಡಿದೆ.
ಪ್ರಕರಣದ ತನಿಖೆ ನಡೆಸಿದ ನ್ಯಾಯಾಂಗ ಆಯೋಗ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದ್ದು, ಈ ವರದಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ ನಂತರ, ಈ ವರದಿಯನ್ನು ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ.
ಈ ಹಿಂದೆ, ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ(SIT)ಸಹ ಭೋಲೆ ಬಾಬಾ ಅಲಿಯಾಸ್ ಸೂರಜ್ ಪಾಲ್ ಗೆ ಕ್ಲೀನ್ ಚಿಟ್ ನೀಡಿತ್ತು.
ಈ ಘಟನೆಯಲ್ಲಿ ಭೋಲೆ ಬಾಬಾ ಅವರ ನೇರ ಪಾತ್ರವಿಲ್ಲ ಎಂದು ತನಿಖೆಯಲ್ಲಿ ತೀರ್ಮಾನಿಸಲಾಗಿದ್ದು, ಸಂಘಟಕರು ಮತ್ತು ಆಡಳಿತ ಅಧಿಕಾರಿಗಳ ತಪ್ಪು ನಿರ್ವಹಣೆ ಹಾಗೂ ಅವ್ಯವಸ್ಥೆಯೇ ಈ ದುರಂತಕ್ಕೆ ಕಾರಣ ಎಂದು ವರದಿ ಹೇಳಿದೆ.
ವರದಿಗಳ ಪ್ರಕಾರ, ಕಳೆದ ವರ್ಷ ಜುಲೈ 2 ರಂದು ದೇಶವನ್ನೇ ಬೆಚ್ಚಿಬೀಳಿಸಿದ ಈ ಕಾಲ್ತುಳಿತಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ನ್ಯಾಯಾಂಗ ಆಯೋಗ ಆರೋಪಿಸಿದೆ. ವರದಿಯು ಕಾರ್ಯಕ್ರಮದ ಆಯೋಜಕರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಿದೆ.
ಜುಲೈ 2, 2024 ರಂದು ಹತ್ರಾಸ್ ಪಟ್ಟಣದಿಂದ 47 ಕಿಮೀ ದೂರದಲ್ಲಿರುವ ಫುಲ್ರೈ ಗ್ರಾಮದಲ್ಲಿ ನಡೆದ ಧಾರ್ಮಿಕ ಸಭೆಯ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 121 ಜನ ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿದ್ದರು.