ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟು ಜನರ ಕೋಪಕ್ಕೆ ಗುರಿಯಾದರು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ.
ರೇಖಾ ಗುಪ್ತಾ ಎಂಬ ಮಹಿಳೆ ರಾಷ್ಟ್ರ ರಾಜಧಾನಿಯ ಹೊಸ ಮುಖ್ಯಮಂತ್ರಿಯಾಗುವುದು ಹೆಮ್ಮೆಯ ವಿಷಯ. ಅವರ ಶುದ್ಧ ಆಲೋಚನೆಗಳು ಮತ್ತು ಕಾರ್ಯಗಳಿಂದಾಗಿ ಜನರು ಅವರಿಗೆ ಮತ ಹಾಕಿದರು ಎಂದು ಬಣ್ಣಿಸಿದ್ದಾರೆ.
ಮುಖ್ಯಮಂತ್ರಿಯಾಗಿ, ಕೇಜ್ರಿವಾಲ್ ಸಮಾಜದ ಮುಂದೆ ಒಂದು ಉದಾಹರಣೆಯಾಗಿ ಮಾದರಿಯಾಗಿ ನಿಲ್ಲಬೇಕಿತ್ತು. ಆದರೆ ದಾರಿ ತಪ್ಪಿದರು ಎಂದು ಆಮ್ ಆದ್ಮಿ ಪಕ್ಷದ ಜನನಕ್ಕೆ ಕಾರಣವಾದ ಭ್ರಷ್ಟಾಚಾರ ವಿರೋಧಿ ಆಂದೋಲನದ ಎಪ್ಪತ್ತು ವರ್ಷದ ಕಾರ್ಯಕರ್ತ, ಒಂದು ಕಾಲದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಗುರು ಅಣ್ಣಾ ಹಜಾರೆ ಹೇಳಿದ್ದಾರೆ.
ಹಿಂದಿನ ಸಿಎಂ ಕೇಜ್ರಿವಾಲ್ ಉತ್ತಮ ಕೆಲಸ ಮಾಡುತ್ತಿದ್ದರು, ಅದರಿಂದಾಗಿಯೇ ದೆಹಲಿ ಜನ ಅವರನ್ನು ಮೂರು ಬಾರಿ ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡಿದರು. ಅವರು ಉತ್ತಮ ಕೆಲಸ ಮಾಡುತ್ತಿದ್ದರಿಂದ ನಾನು ಅವರ ವಿರುದ್ಧ ಏನನ್ನೂ ಮಾತನಾಡಲಿಲ್ಲ. ಆದರೆ ನಂತರ, ಅವರು ನಿಧಾನವಾಗಿ ಮದ್ಯದಂಗಡಿಗಳನ್ನು ತೆರೆಯಲು ಮತ್ತು ಪರವಾನಗಿಗಳನ್ನು ನೀಡಲು ಪ್ರಾರಂಭಿಸಿದರು, ಇದರಿಂದ ನಾನು ಕೂಡ ಅಸಮಾಧಾನಗೊಂಡಿದ್ದೆ ಎಂದು ಎಎಪಿ ಸರ್ಕಾರದ ವಿವಾದಾತ್ಮಕ ಅಬಕಾರಿ ನೀತಿಯನ್ನು ಉಲ್ಲೇಖಿಸಿ ಅಣ್ಣಾ ಹಜಾರೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಕೇಜ್ರಿವಾಲ್ ಒಂದು ಕಾಲದಲ್ಲಿ ಹಜಾರೆ ಅವರ ಸಹವರ್ತಿಯಾಗಿದ್ದರು, ಆದರೆ 2012 ರಲ್ಲಿ ಹಜಾರೆ ಎಎಪಿಯನ್ನು ರಚಿಸಿದ ನಂತರ ಇಬ್ಬರೂ ಬೇರೆಯಾದರು. ಈ ತಿಂಗಳ ಆರಂಭದಲ್ಲಿ ನಡೆದ ಚುನಾವಣೆಯಲ್ಲಿ, ಬಿಜೆಪಿ ದೆಹಲಿಯಲ್ಲಿ ಎಎಪಿಯನ್ನು ಅಧಿಕಾರದಿಂದ ಕಿತ್ತೊಗೆದಿದ್ದು ಮಾತ್ರವಲ್ಲದೆ ಕೇಜ್ರಿವಾಲ್ ತಮ್ಮ ಸ್ಥಾನವನ್ನು ಕಳೆದುಕೊಂಡರು.
2021-22 ರ ದೆಹಲಿ ಅಬಕಾರಿ ನೀತಿಯನ್ನು ಮಾರ್ಪಡಿಸುವಾಗ ಅಕ್ರಮಗಳನ್ನು ಎಸಗಲಾಗಿದೆ. ಪರವಾನಗಿ ಹೊಂದಿರುವವರಿಗೆ ಅನಗತ್ಯ ಅನುಕೂಲಗಳನ್ನು ನೀಡಲಾಗಿದೆ ಎಂದು ಕೇಂದ್ರ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ನಂತರ ಈ ನೀತಿಯನ್ನು ರದ್ದುಗೊಳಿಸಲಾಯಿತು.