ಭುವನೇಶ್ವರ: ಮೊಬೈಲ್ ಫೋನ್'ವೊಂದು ವ್ಯಕ್ತಿಯೊಬ್ಬರ ಜೀವ ಉಳಿಸಿರುವ ಘಟನೆಯೊಂದು ಭುವನೇಶ್ವರದಲ್ಲಿ ನಡೆದಿದೆ.
ಅಮಿತಾಭ್ ಬಚ್ಚನ್ ಅಭಿನಯದ "ದೀವಾರ್" ಚಿತ್ರದಲ್ಲಿ ತಾಮ್ರದ ಬ್ಯಾಡ್ಜ್ ವೊಂದು ಖಳನಾಯಕ ಹಾರಿಸಿದ ಗುಂಡುಗಳಿಂದ ನಾಯಕ ನಟನನ್ನು ರಕ್ಷಣೆ ಮಾಡಿರುತ್ತದೆ. ಅದೇ ರೀತಿಯ ಘಟನೆಯಲ್ಲಿ ಆದಿತ್ಯ ಪರುವಾ ಎಂಬುವವರು ಪಾರಾಗಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆದಿತ್ಯ ಪರುವಾ (29) ಎಂಬುವವರ ಮೇಲೆ ಆಗಂತುಕರು ಭಾನುವಾರ ಗುಂಡು ಹಾರಿಸಿದ್ದಾರೆ. ಆದರೆ, ಅವರು ಹಾರಿಸಿದ ಗುಂಡೇಟು ಆದಿತ್ಯ ಅವರ ಮೊಬೈಲ್ ಪೋನ್ ಗೆ ತಗುಲಿದ್ದು, ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಪೊಲೀಸರು ಇಬ್ಬರು ಸಹೋದರರು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧನಕ್ಕೊಪಡಿಸಿದ್ದಾರೆ.
ಆದಿತ್ಯ ಅವರಿಗೆ ಸೇರಿದ ಭೂಮಿಯಲ್ಲಿ ಆರೋಪಿಗಳಾದ ಯುವರಾಜ್ ಸಿಂಗ್ (34) ಮತ್ತು ಈತನ ಸಹೋದರ ಭಾನು ಪ್ರತಾಪ್ ಸಿಂಗ್ (30) ಗೋಡೆ ನಿರ್ಮಿಸುತ್ತಿದ್ದರು. ಈ ವಿಚಾರವಾಗಿ ಜಗಳವಾಗಿದೆ. ನಿರ್ಮಾಣ ಕಾರ್ಯಕ್ಕೆ ವಿರೋಧಿಸಿದ್ದಕ್ಕೆ ಇಬ್ಬರು ಸಹೋದರರು ಆದಿತ್ಯ ಅವರನ್ನು ನಿಂದಿಸಿ, ಹಲ್ಲೆ ನಡೆಸಿ ಪರಾರಿಯಾಗಿದ್ದರು. ನಂತರ ಮತ್ತಿಬ್ಬರು ಸಹಚರರೊಂದಿಗೆ ಸಂಜೆ 4.30ರ ಸುಮಾರಿಗೆ ಸ್ಥಳಕ್ಕೆ ಬಂದು ಆದಿತ್ಯ ಅವರ ಮೇಲೆ ಗುಂಡು ಹಾರಿಸಿ, ಹತ್ಯೆ ಮಾಡಲು ಯತ್ನಿಸಿದ್ದಾರೆ.
ಗುಂಡು ಹಾರಿಸಿರುವ ಆರೋಪಿಗಳು, ಆದಿತ್ಯಾಗೆ ಗುಂಡು ತಗುಲಿದೆ ಎಂದು ಭಾವಿಸಿ, ಸ್ಥಳದಿಂದ ಪರಾರಿಯಾಗಿದ್ದಾರೆ. ದೇಶೀಯ ನಿರ್ಮಿತ ಪಿಸ್ತೂಲಿನಿಂದ ಗುಂಡು ಹಾರಿಸಲಾಗಿದ್ದು, ಗುಂಡೇಟು ಮೊಬೈಲ್ ಫೋನ್ ಗೆ ತಲುಗುಲಿದೆ. ಪರಿಣಾಮ ಆದಿತ್ಯ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಕೂಡಲೇ ಅವರು ಝಾರ್ಸುಗುಡ ಪೊಲೀಸ್ ಠಾಣೆಗೆ ತೆರಳಿ, ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಯಾಗಿರುವ ಯುವರಾಜ್ ವಕೀಲನಾಗಿದ್ದು, ಈತನ ಹಿಂದೆ ಯಾವುದೇ ಪೊಲೀಸ್ ಪ್ರಕರಣಗಳಿಲ್ಲ. ಆದರೆ, ಕಿರಿಯ ಸಹೋದರ ಭಾನು ಪ್ರತಾಪ್ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ದೂರು ಹಿನ್ನೆಲೆಯಲ್ಲಿ ಝಾರ್ಸುಗುಡ ಪಟ್ಟಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಘಟನೆ ನಡೆದ ಕೆಲವೇ ಗಳಲ್ಲಿ ಇಬ್ಬರು ಸಹೋದರರು ಹಾಗೂ ಅವರ ಸಹಚರರನ್ನು ಬಂಧಿಸಲಾಯಿತು ಎಂದು ಎಸ್ಪಿ ಪರ್ಮಾರ್ ಅವರು ಹೇಳಿದ್ದಾರೆ.
ಇನ್ನು ಘಟನೆಯಲ್ಲಿ ಗುಂಡು ಹೊಕ್ಕ ಮೊಬೈಲ್ ಫೋನ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳಿಂದಲೂ ಒಂದು ಕಾರು ಹಾಗೂ ದೇಶೀಯ ಪಿಸ್ತೂಲ್ ನ್ನು ವಶಕ್ಕೆ ಪಡೆದಿದ್ದಾರೆ. ಆದಿತ್ಯ ಸಂಬಲ್ಪುರದ ಖಿಂಡಾದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.