ನವದೆಹಲಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಆಯ್ಕೆಯನ್ನು ಪ್ರಶ್ನಿಸಿ ತಮ್ಮ ವಿರುದ್ಧ 'ಅಸ್ಪಷ್ಟ ಆರೋಪ' ಮಾಡಿರುವ ಬಿಜೆಪಿ ನಾಯಕರೊಬ್ಬರ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕರ್ನಾಟಕ ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಚುನಾವಣಾ ಅರ್ಜಿಯಲ್ಲಿನ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿದಾಗ ಕರ್ನಾಟಕ ಹೈಕೋರ್ಟ್‌ನಲ್ಲಿ ತಮ್ಮ ಅಹವಾಲು ಸಲ್ಲಿಸಬಹುದು ಎಂದು ಹೇಳಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ರಾಜೇಗೌಡ ಅವರ ಅರ್ಜಿಯನ್ನು ಪರಿಗಣಿಸಲು ಯಾವುದೇ ಸಕಾರಣವಿಲ್ಲ ಎಂದು ಹೇಳಿತು.
ಬಿಜೆಪಿಯ ಡಿ.ಎನ್.ಜೀವರಾಜ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಚುನಾವಣಾ ತಕರಾರರು ಅರ್ಜಿಯಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಕಪ್ಪುಹಣ ಬಳಕೆ ಮುಂತಾದ ಅಸ್ಪಷ್ಟ ಆರೋಪಗಳನ್ನು ಮಾಡಿದ್ದಾರೆ ಎಂದು ರಾಜೇಗೌಡ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರು.
ಆಧಾರ ರಹಿತ ಆರೋಪಗಳ ಬಗ್ಗೆ ನಾವು ಕಳಕಳಿ ಹೊಂದಿದ್ದೇವೆ. ಆದರೆ, ಸಾಕ್ಷಿ ಹಾಜರುಪಡಿಸುವಲ್ಲಿ ಕಾನೂನಿನಲ್ಲಿ ಅವಕಾಶವಿದೆ ಎಂದು ನ್ಯಾಯಪೀಠ ಹೇಳಿತು. 2023ರ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರ ಆಯ್ಕೆಯನ್ನು ಪ್ರಶ್ನಿಸಿ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಳೆದ ವರ್ಷ ಸೆಪ್ಟೆಂಬರ್ 27 ರಂದು ರಾಜೇಗೌಡ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನಲ್ಲಿಯೇ ತಮ್ಮ ವಿವಾದ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಹೇಳಿತ್ತು.