ಹೈದರಾಬಾದ್: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮಂಗಳವಾರ ವಿಚಾರಗಣೆಗೆ ಹಾಜರಾಗದ ಬಿಆರ್‌ಎಸ್ ನಾಯಕ ಕೆ ಟಿ ರಾಮರಾವ್ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಹೊಸ ಸಮನ್ಸ್ ಜಾರಿ ಮಾಡಿದ್ದು, ಜನವರಿ 16 ರಂದು ವಿಚಾರಣೆಗೆ ಬರುವಂತೆ ಸೂಚಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹೈದರಾಬಾದ್‌ನಲ್ಲಿ ನಡೆದ ಫಾರ್ಮುಲಾ-ಇ ರೇಸ್‌ನಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಕೆಟಿಆರ್‌ಗೆ ಇಡಿ ಸಮನ್ಸ್ ಜಾರಿ ಮಾಡಿತ್ತು.
ಆದರೆ, 48 ವರ್ಷದ ರಾಮರಾವ್ ಅವರು ವಿಚಾರಣೆಗೆ ಹಾಜರಾಗಲು ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ. ಆದ್ದರಿಂದ ಜನವರಿ 16 ರಂದು ಹಾಜರಾಗಲು ಅವರಿಗೆ ಹೊಸ ಸಮನ್ಸ್ ನೀಡಲಾಗಿದೆ.
ಫೆಬ್ರವರಿ 2023ರಲ್ಲಿ ಹೈದರಾಬಾದ್‌ನಲ್ಲಿ ಮೊಟ್ಟ ಮೊದಲ ಫಾರ್ಮುಲ-ಇ ರೇಸ್ ನಡೆದಿತ್ತು. ಆಗ ತೆಲಂಗಾಣದಲ್ಲಿ ಬಿಆರ್‌ಎಸ್ ಸರ್ಕಾರ ಆಡಳಿತ ನಡೆಸುತ್ತಿತ್ತು. ರೇಸ್ ಆಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಕೆಟಿಆರ್ ವಿರುದ್ದ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಇಡಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದರು.