ಇಟಾನಗರ: ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಭಾರತ- ಚೀನಾ ಸಮೀಪದಲ್ಲಿರುವ ಮೊದಲ ಆಡಳಿತ ಕೇಂದ್ರವಾದ ಝೆಮಿಥಾಂಗ್ ನ ಗೋರ್ ಸಮ್ ಚೋರ್ಟೆನ್ ನಲ್ಲಿ ಇದೀಗ 73 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದೆ.
ಭಾರತೀಯ ಸೇನೆ ಮತ್ತು ಸ್ಥಳೀಯಾಡಳಿತ ಜಂಟಿಯಾಗಿ ಆಯೋಜಿಸಿದ್ದ ಸಮಾರಂಭದ ನೇತೃತ್ವವನ್ನು ತವಾಂಗ್ ಬ್ರಿಗೇಡ್ ಕಮಾಂಡರ್ ಬ್ರಿಗೇಡಿಯರ್ ವಿಪುಲ್ ಸಿಂಗ್ ರಜಪೂತ್ ವಹಿಸಿದ್ದರು. ಸ್ಥಳೀಯ ಗ್ರಾಮದ ಹಿರಿಯರು ಮತ್ತು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಸೇನಾ ಸಿಬ್ಬಂದಿಯಿಂದ ಸೇನಾ ಗೌರವ ಸಲ್ಲಿಸುವುದರೊಂದಿಗೆ ಧ್ವಜಾರೋಹಣ ನೆರವೇರಿತು. ನಂತರ ರಾಷ್ಟ್ರಗೀತೆ ಹಾಡಲಾಯಿತು. ಚೀನಾ- ಭೂತಾನ್ ಗಡಿಯೊಂದಿಗೆ ಹೊಂದಿಕೊಂಡಿರುವ ನಿಸರ್ಗ ರಮಣೀಯ ಪ್ರದೇಶದಲ್ಲಿ ಎತ್ತರದ ಧ್ವಂಜಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಾಟದಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುವ ನಿರೀಕ್ಷೆಯಿದೆ.
ಭವಿಷ್ಯದಲ್ಲಿ ಜಿಲ್ಲೆಯ ಇತರ ಪ್ರಮುಖ ಸ್ಥಳಗಳಲ್ಲಿ ಇಂತಹ ಹೆಚ್ಚಿನ ಧ್ವಜಸ್ತಂಭ ಸ್ಥಾಪಿಸಲು ಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಇದು ತವಾಂಗ್ ಸೆಕ್ಟರ್‌ನಲ್ಲಿ ಸ್ಥಾಪಿಸಲಾದ ಎರಡನೇ ಅತಿ ಎತ್ತರದ ಧ್ವಜಸ್ತಂಭವಾಗಿದೆ. ಕಳೆದ ವರ್ಷ ಜನವರಿಯಲ್ಲಿ ಆಯಕಟ್ಟಿನ ಬುಮ್ ಲಾ ಪಾಸ್‌ನಲ್ಲಿ ಅತ್ಯಂತ ಎತ್ತರದ ಧ್ವಜ ಸ್ತಂಭದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಾಗಿತ್ತು.