ಪ್ರಯಾಗ್‌ರಾಜ್: ಮಹಾ ಕುಂಭ ಮೇಳಕ್ಕೆ ಬರುವವರಿಗೆ ಕೇವಲ 9 ರೂ.ಗೆ ಫುಲ್ ಊಟ ನೀಡುವ 'ಮಾ ಕಿ ರಸೋಯಿ' ಎಂಬ ಸಮುದಾಯ ಅಡುಗೆಮನೆಯನ್ನು ಶುಕ್ರವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದರು.
ಈ ಸಮುದಾಯ ಅಡುಗೆಮನೆಯನ್ನು ಸ್ವರೂಪ್ ರಾಣಿ ನೆಹರು ಆಸ್ಪತ್ರೆಯಲ್ಲಿ ನಂದಿ ಸೇವಾ ಸಂಸ್ಥಾನ ನಿರ್ವಹಿಸುತ್ತದೆ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಜನರನ್ನು ಬೆಂಬಲಿಸಲು ಉತ್ತರ ಪ್ರದೇಶ ಸರ್ಕಾರ ಈ ಯೋಜನೆ ಘೋಷಿಸಿದೆ.
ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ ಸಿಎಂ ಯೋಗಿ ಆದಿತ್ಯನಾಥ್ ಅವರು ಆಸ್ಪತ್ರೆಯ ಸೌಲಭ್ಯಗಳನ್ನು ಪರಿಶೀಲಿಸಿದರು ಮತ್ತು ಉಪಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಹಾಜರಿದ್ದವರಿಗೆ ವೈಯಕ್ತಿಕವಾಗಿ ಆಹಾರವನ್ನು ನೀಡಿದರು.
ಮಹಾಕುಂಭ ಮೇಳದ ಸಮಯದಲ್ಲಿ ಭಕ್ತರು, ನಿವಾಸಿಗಳಿಗೆ ಕೈಗೆಟುಕುವ ಮತ್ತು ಪೌಷ್ಟಿಕಾಂಶದ ಊಟವನ್ನು ಖಾತ್ರಿಪಡಿಸುವಲ್ಲಿ ಈ ಯೋಜನೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
"ನಂದಿ ಸೇವಾ ಸಂಸ್ಥಾನವು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳನ್ನು ಬೆಂಬಲಿಸಲು ಈ ಉಪಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮದಡಿಯಲ್ಲಿ, ಜನರು ಕೇವಲ 9 ರೂ.ಗೆ ಫುಲ್ ಊಟವನ್ನು ಆನಂದಿಸಬಹುದು. ಊಟದಲ್ಲಿ ದಾಲ್, ನಾಲ್ಕು ರೊಟ್ಟಿ, ತರಕಾರಿಗಳು, ಅನ್ನ, ಸಲಾಡ್ ಮತ್ತು ಸಿಹಿತಿಂಡಿ ಸೇರಿವೆ" ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಉದ್ಘಾಟನೆಯ ನಂತರ, ಕೈಗಾರಿಕಾ ಅಭಿವೃದ್ಧಿ ಸಚಿವ ನಂದ ಗೋಪಾಲ್ ಗುಪ್ತಾ ಅವರು, ಮುಖ್ಯಮಂತ್ರಿಯನ್ನು ಅಡುಗೆಮನೆಗೆ ಕರೆದುಕೊಂಡು ಹೋಗಿ, ಆಹಾರದ ಗುಣಮಟ್ಟ, ನೈರ್ಮಲ್ಯ ಮಾನದಂಡಗಳು ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.