ಪುಣೆ: ಹಿಂದುತ್ವ ಪ್ರತಿಪಾದಕ ವಿ.ಡಿ. ಸಾರ್ವಕರ್ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದ ಮಾನಹಾನಿ ಕೇಸ್ ನಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪುಣೆಯ ವಿಶೇಷ ನ್ಯಾಯಾಲಯವೊಂದು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿಗೆ ರೂ. 25,000 ಮೊತ್ತದ ಶ್ಯೂರಿಟಿ ಬಾಂಡ್ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು. ಹಿರಿಯ ಕಾಂಗ್ರೆಸ್ ನಾಯಕ ಮೋಹನ್ ಜೋಶಿ ಅವರು ರಾಹುಲ್ ಗಾಂಧಿಗೆ ಶ್ಯೂರಿಟಿ ನೀಡಿದರು.
ನ್ಯಾಯಾಲಯವು ಕಾಂಗ್ರೆಸ್ ನಾಯಕನಿಗೆ ತನ್ನ ಮುಂದೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ನೀಡಿದ್ದು, ಫೆಬ್ರವರಿ 18 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ ಎಂದು ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ತಿಳಿಸಿದರು. ಸಾವರ್ಕರ್ ಅವರ ಮೊಮ್ಮಗನ ದೂರಿನ ಮೇರೆಗೆ ಈ ಪ್ರಕರಣವನ್ನು ದಾಖಲಿಸಲಾಗಿತ್ತು.
ಮಾರ್ಚ್ 2023 ರಲ್ಲಿ ಲಂಡನ್‌ನಲ್ಲಿ ರಾಹುಲ್ ಗಾಂಧಿ ಮಾಡಿದ್ದ ಭಾಷಣದಲ್ಲಿ ಸಾರ್ವಕರ್ ಬರೆದಿರುವ ಪುಸ್ತಕವೊಂದನ್ನು ಉಲ್ಲೇಖಿಸಿ, ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದರು.