ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿಯು ಮಾಜಿ ಸಂಸದ ರಮೇಶ್ ಬಿಧುರಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಶೀಘ್ರದಲ್ಲೇ ಘೋಷಣೆ ಮಾಡಲಿದೆ ಎಂದು AAP ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ರಮೇಶ್ ಬಿಧುರಿ ಅವರನ್ನು ಹೆಸರಿಸಲಿದೆ ಎಂದು ನಮಗೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.
ಎಎಪಿ ಮತ್ತು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಗಳ ನಡುವೆ ಬಹಿರಂಗ ಚರ್ಚೆ ನಡೆಯಬೇಕು, ಅದು ರಮೇಶ್ ಬಿಧುರಿ ಅಥವಾ ಬೇರೆ ಯಾರೇ ಆಗಿರಲಿ ಎಂದರು. ಹೌದು ಬಹಿರಂಗ ಚರ್ಚೆಗೆ ಬಿಜೆಪಿಗೆ ಸವಾಲು ಹಾಕುತ್ತಿದ್ದೇವೆ ಎಂದು ಕೇಜ್ರಿವಾಲ್ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಕಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಬಿಧುರಿ ಅವರನ್ನು ಕಣಕ್ಕಿಳಿಸಿದೆ. ಎಎಪಿ ಅಭ್ಯರ್ಥಿ ಮತ್ತು ದೆಹಲಿ ಮುಖ್ಯಮಂತ್ರಿ ಅತಿಶಿ ಅವರಿಗೆ ಎದುರಾಳಿಯಾಗಿದ್ದಾರೆ. ಅತಿಶಿ ಬಗ್ಗೆ ಬಿಧುರಿ ಅವರು ಇತ್ತೀಚೆಗೆ ಹೇಳಿದ ಮಾತುಗಳು ವಿವಾದ ಹುಟ್ಟುಹಾಕಿತ್ತು.
ಮುಖ್ಯಮಂತ್ರಿ ಅತಿಶಿ ಅವರ ಉಪನಾಮ 'ಮರ್ಲೆನಾ' ಬಳಸುವುದನ್ನು ನಿಲ್ಲಿಸುವ ನಿರ್ಧಾರವನ್ನು ಉಲ್ಲೇಖಿಸಿ, ಮರ್ಲೆನಾ ಸಿಂಗ್ ಆಗಿದ್ದಾರೆ. ಆಕೆ ತನ್ನ ತಂದೆಯನ್ನೇ ಬದಲಾಯಿಸಿದ್ದಾಳೆ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದರು.
ಕಾಂಗ್ರೆಸ್ ನಾಯಕಿ ‘ಪ್ರಿಯಾಂಕಾ ಗಾಂಧಿ ಅವರ ಕೆನ್ನೆಯಂತೆ’ ತಮ್ಮ ಕ್ಷೇತ್ರದ ರಸ್ತೆಗಳನ್ನು ಸುಗಮಗೊಳಿಸುವುದಾಗಿ ಹೇಳಿ ವಿವಾದ ಮೇಲೆ ವಿವಾದ ಹುಟ್ಟು ಹಾಕಿದ್ದರು. ವ್ಯಾಪಕ ಆಕ್ರೋಶದ ಬಳಿಕ ಅವರು ವಿಷಾದ ವ್ಯಕ್ತಪಡಿಸಿದ್ದರು.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ. 2015 ರ ಚುನಾವಣೆಯಲ್ಲಿ 67 ಸ್ಥಾನಗಳನ್ನು ಮತ್ತು 2020 ರ ಚುನಾವಣೆಯಲ್ಲಿ 62 ಸ್ಥಾನಗಳನ್ನು ಗೆದ್ದಿದ್ದ ಎಎಪಿ, ರಾಜಧಾನಿಯಲ್ಲಿ ಸತತ ಮೂರನೇ ಅವಧಿಯ ಮೇಲೆ ಕಣ್ಣಿಟ್ಟಿದೆ.