ಹರ್ಷ ರಿಚಾರಿಯಾ 
ದೇಶ

Maha kumbh 2025: 'ನಾನು ಸಾಧ್ವಿ ಅಲ್ಲ.. ಮಾರ್ಗದಲ್ಲಿದ್ದೇನೆ...'; ಕಣ್ಣೀರು ಹಾಕಿದ 'ಸುಂದರ' ಸಾಧ್ವಿ Harsha Richhariya

ಕುಂಭಮೇಳದಲ್ಲಿ ಸಾಧುಗಳ ವೇಷದಲ್ಲಿ ಕಾಣಿಸಿಕೊಂಡಿದ್ದ ಹರ್ಷ ರಿಚ್ಚಾರಿಯಾ ಅವರನ್ನು ಆರಂಭದಲ್ಲಿ ಅತ್ಯಂತ ಸುಂದರ ಸಾಧ್ವಿ ಎಂದು ಬಣ್ಣಿಸಲಾಗಿತ್ತು.

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇತ್ತೀಚೆಗೆ 'ಅತ್ಯಂತ ಸುಂದರ ಸಾಧ್ವಿ' ಎಂದೇ ಖ್ಯಾತಿ ಪಡೆದಿದ್ದ harsha richhariya ಇದೀಗ ತಾನು ಸಾಧ್ವಿ ಅಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಹೌದು.. ಮಹಾಕುಂಭಮೇಳದಲ್ಲಿ ಅತ್ಯಂತ ಸುಂದರ ಸಾಧ್ವಿ ಎಂದು ವೈರಲ್ ಆಗುತ್ತಿದ್ದ ಹರ್ಷ ರಿಚ್ಚಾರಿಯಾ ಇದೀಗ ತಾನು ಸಾಧ್ವಿ ಅಲ್ಲ.. ಆದರೆ ಸಾಧನೆಯ ಮಾರ್ಗದಲ್ಲಿದ್ದೇನೆ.. ನನ್ನನ್ನು ಟ್ರೋಲ್ ಮಾಡಬೇಡಿ ಎಂದು ಕಣ್ಣೀರು ಹಾಕಿದ್ದಾರೆ.

ಕುಂಭಮೇಳದಲ್ಲಿ ಸಾಧುಗಳ ವೇಷದಲ್ಲಿ ಕಾಣಿಸಿಕೊಂಡಿದ್ದ ಹರ್ಷ ರಿಚ್ಚಾರಿಯಾ ಅವರನ್ನು ಆರಂಭದಲ್ಲಿ ಅತ್ಯಂತ ಸುಂದರ ಸಾಧ್ವಿ ಎಂದು ಬಣ್ಣಿಸಲಾಗಿತ್ತು. ಈ ವೇಳೆ ಈಕೆ ಕೂಡ ತಾನು 2 ವರ್ಷದಿಂದ ಸನ್ಯಾಸತ್ವದ ಮಾರ್ಗದಲ್ಲಿದ್ದೇನೆ ಎಂದು ಹೇಳಿದ್ದರು.

ಆದರೆ ಈಕೆ 2 ತಿಂಗಳ ಹಿಂದೆ ತಮ್ಮ ಇನ್ ಸ್ಚಾಗ್ರಾಮ್ ಖಾತೆಯಲ್ಲಿ ತಮ್ಮ ಗ್ಲಾಮರಸ್ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಲೇ ಈಕೆಯನ್ನು ಕಳ್ಳ ಸಾಧ್ವಿ ಎಂಬ ಧಾಟಿಯಲ್ಲಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಕಂಭಮೇಳದಿಂದ ಹೊರಕ್ಕೆ

ಇನ್ನು ಈಕೆಯ ಕುರಿತು ವ್ಯಾಪಕ ಟ್ರೋಲ್ ಗಳು ಹರಿದಾಡುತ್ತಲೇ ಈಕೆಯನ್ನು ಕುಂಭಮೇಳದಿಂದ ಹೊರಗೆ ಹೋಗುವಂತೆ ಆಕೆಯ ಗುರುಗಳು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಹರ್ಷ ರಿಚಾರಿಯಾ ಅವರೇ ಕಣ್ಣೀರು ಹಾಕುತ್ತಾ ಹೇಳಿಕೆ ನೀಡಿದ್ದು ನನ್ನ ಗುರುಗಳು ಕುಂಭಮೇಳದಿಂದ ಹೊರಗೆ ಹೋಗುವಂತೆ ಹೇಳಿದ್ದಾರೆ. ನಾನು ಮಾಡದ ತಪ್ಪಿಗೆ ಇಂತಹ ಘೋರ ಶಿಕ್ಷೆ ಸರಿಯಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ನಾನೆಲ್ಲೂ ನನ್ನನ್ನು ಸಾಧ್ವಿ ಎಂದು ಕರೆದುಕೊಂಡಿಲ್ಲ.. ಆದರೆ ನಾನು ಸನ್ಯಾಸತ್ವದ ಮಾರ್ಗದಲ್ಲಿದ್ದೇನೆ. ನಾನು ಮಾಡೆಲ್ ಅಲ್ಲ ಅಥವಾ ಸಂತೆಯೂ ಅಲ್ಲ... ನಾನು ಕೇವಲ ಆಂಕರ್ ಮತ್ತು ನಟಿಯಾಗಿದ್ದೆ. ನಾನು ಮಹಿಳೆಯಾಗಿದ್ದರೂ ಕೆಲ ಸಂತರು ನನ್ನನ್ನು ಅವಮಾನಿಸುತ್ತಿದ್ದಾರೆ.. ಈಗ ನಾನು ಕುಂಭಮೇಳದ 10 ಅಡಿ ಜಾಗಕ್ಕೇ ಸೀಮಿತಳಾಗಿದ್ದೇನೆ. ಟ್ರೋಲ್ ಗಳಿಂದಾಗಿ ನಾನು ಈಗ 24 ಗಂಟೆಯೂ ಈ ಡೇರೆಯಲ್ಲೇ ಕಳೆಯುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಹರ್ಷ ರಿಚಾರಿಯಾ, 'ಈಗ ನನಗೆ ಭಯವಾಗುತ್ತಿದೆ. ನನ್ನ ವಿರುದ್ಧ ಹೊರಿಸಲಾಗಿರುವ ಆರೋಪಗಳಿಂದ ನಾನು ತೊಂದರೆಗೀಡಾಗಿದ್ದೇನೆ ಮತ್ತು ದುಃಖಿತಳಾಗಿದ್ದೇನೆ. ಈಗ ನಾನು ಮಹಾ ಕುಂಭಮೇಳದಿಂದ ಹೊರಗೆ ಹೋಗಬೇಕಿದೆ. ನಾನು ಇಡೀ ಮಹಾಕುಂಭದಲ್ಲಿ ಉಳಿಯಲು ಇಲ್ಲಿಗೆ ಬಂದಿದ್ದೆ. ನಾನು ಎಲ್ಲಿಯೂ ನಾನು ಸಾಧ್ವಿ ಎಂದು ಹೇಳಿಕೊಂಡಿಲ್ಲ. ನಾನು ಮಹಾರಾಜ್ ಜೀ ಅವರ ಭಕ್ತೆ ಅಷ್ಟೇ. ನಾನು ಸಂತೆಯಲ್ಲ. ಸಂತೆ ಎಂಬುದು ತುಂಬಾ ದೊಡ್ಡದು, ಈ ಟ್ಯಾಗ್ ನನಗೆ ನೀಡಬಾರದು. ನಾನು ನನ್ನ ಗುರುದೇವರ ಮಾರ್ಗದರ್ಶನದಲ್ಲಿ ಮಹಾಕುಂಭವನ್ನು ತಿಳಿದುಕೊಳ್ಳಲು, ಅನುಭವಿಸಲು ಮತ್ತು ಅರ್ಥಮಾಡಿಕೊಳ್ಳಲು ಪವಿತ್ರ ಸ್ಥಳವಾದ ಪ್ರಯಾಗ್‌ರಾಜ್‌ಗೆ ಬಂದಿರುವ ಒಬ್ಬ ಸರಳ ಶಿಷ್ಯಳು ಮಾತ್ರ ಎಂದು ಹೇಳಿದ್ದಾರೆ.

ನಾನು ಸ್ವಲ್ಪ ಸಮಯದ ಹಿಂದೆ ನನ್ನ ಗುರುಗಳಿಂದ ದೀಕ್ಷೆ ಪಡೆದಿದ್ದೆ. ನಾನು ಮಂತ್ರ ದೀಕ್ಷೆ ತೆಗೆದುಕೊಂಡಿದ್ದೇನೆ. ನನ್ನ ಗುರುಗಳಿಗೆ ಲಕ್ಷಾಂತರ ಶಿಷ್ಯರು ಮತ್ತು ಮಕ್ಕಳಿದ್ದಾರೆ. ನಾನು ಆ ಮಕ್ಕಳಲ್ಲಿ ಒಬ್ಬಳು, ಅವರ ಮಗಳು, ಅವರ ಶಿಷ್ಯೆ. ಅವರ ಸಹವಾಸದಲ್ಲಿರಲು ನನಗೆ ಅವಕಾಶ ಸಿಕ್ಕಿದ್ದು ತುಂಬಾ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಸಾರೋಟಿನಲ್ಲಿ ನಾನು ಕುಳಿತುಕೊಳ್ಳುವ ವಿಷಯವು ವಿವಾದಕ್ಕೆ ಕಾರಣವಾಗುತ್ತಿದ್ದು, ಅದು ವಿವಾದದ ವಿಷಯವಾಗಿರಲಿಲ್ಲ. ಅದರಲ್ಲಿ ಕುಳಿತಿದ್ದದ್ದು ನಾನೊಬ್ಬಳೇ ಅಲ್ಲ. ನಾನು ಮಾತ್ರ ಕೇಸರಿ ಶಾಲು ಧರಿಸಲಿಲ್ಲ. ಅತ್ಯಂತ ಮುಖ್ಯವಾದ ವಿಷಯವೆಂದರೆ ನಾನು ಹಿಂದೂವಾಗಿ, ಸನಾತನಿಯಾಗಿ, ಕೇಸರಿ ಶಾಲು ಧರಿಸಿದ್ದರೆ ಅದು ಹೆಮ್ಮೆಯ ವಿಷಯವಾಗಬೇಕಿತ್ತು. ಆದರೆ ಅದು ಇದೀಗ ವಿವಾದವಾಗುತ್ತಿದೆ ಎಂದು ಹೇಳಿದ್ದಾರೆ.

ಆಕೆಗೆ ವಿವಾಹ ಮಾಡುತ್ತೇವೆ

ಇನ್ನು ಮಗಳ ಕುರಿತ ವಿವಾದಗಳ ಕುರಿತು ಪ್ರತಿಕ್ರಿಯೆ ನೀಡಿರುವ ಆಕೆಯ ತಂದೆ ಆಕೆಯ ಸನ್ಯಾಸಿನಿಯಲ್ಲ.. ಆಕೆಗೆ ಶೀಘ್ರದಲ್ಲೇ ನಾವು ವಿವಾಹ ಮಾಡುತ್ತಿದ್ದೇವೆ. ಆಕೆಗೆ ಗಂಡು ಹುಡುಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇಷ್ಟಕ್ಕೂ ಯಾರು ಈ ಹರ್ಷ ರಿಚಾರಿಯಾ

ಹರ್ಷ ರಿಚಾರಿಯಾ ಭೋಪಾಲ್ ನಿವಾಸಿಯಾಗಿದ್ದು, ಈ ಹಿಂದೆ ಯೂಟ್ಯೂಬ್ ಚಾನೆಲ್ ವೊಂದಕ್ಕಾಗಿ ಸಂದರ್ಶನಗಳನ್ನು ನಡೆಸುತ್ತಿದ್ದರು. ಆದ್ಯಾತ್ಮಿಕ ವಿಚಾರಗಳ ಕುರಿತು ವಿಡಿಯೋ ಮಾಡುತ್ತಿದ್ದ ಹರ್ಷ ಈ ಹಿಂದೆ ನಡೆದ ಕುಂಭಮೇಳದಲ್ಲೂ ವರದಿಗಾರಿಕೆ ಮಾಡಿದ್ದರು. ಬಳಿಕ ತಮ್ಮದೇ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಖ್ಯಾತಿ ಗಳಿಸಿದ್ದರು.

ವಿವಾದ ಕೇಂದ್ರಬಿಂದುವಾದ ಜಟೆ

ಇನ್ನು ಹರ್ಷ ರಿಚಾರಿಯಾ ವಿವಾದಕ್ಕೀಡಾಗಲು ಆಕೆಯ ನಕಲಿ ಜಟೆ ಕೂಡ ಕಾರಣ.. ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಹರ್ಷ ಈಗ್ಗೆ 2 ತಿಂಗಳ ಹಿಂದಷ್ಟೇ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದರು. ಆಗ ಇಲ್ಲದ ಜಟೆ ಈಗ ಹೇಗೆ ಬಂತು ಎಂದು ಕೆಲ ನೆಟ್ಟಿಗರು ಪ್ರಶ್ನಿಸಿದ್ದರು. ಇದಕ್ಕೂ ಆಕೆಯ ಖಾತೆಯಿಂದಲೇ ಉತ್ತರ ದೊರೆತಿದ್ದು ಆಕೆಯದ್ದು ಅಸಲಿ ಜಟೆಯಲ್ಲ.. ಅದು ನಕಲಿ ಎಂದು ತಿಳಿದುಬಂದಿದೆ. ಆಕೆ ಕುಂಭಮೇಳಕ್ಕೂ ಮುನ್ನ ತನ್ನ ಕೂದಲಿಗೆ ಜಟೆಯನ್ನು ಸಿಕ್ಕಿಸಿಕೊಳ್ಳುತ್ತಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT