ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತದದಿಂದ ಸುಮಾರು 78 ಜನರು ಸಾವನ್ನಪ್ಪಿದ್ದಾರೆ. 30 ಮಂದಿ ನಾಪತ್ತೆಯಾಗಿದ್ದು, ಡ್ರೋನ್ ಮತ್ತು ಸ್ನಿಫರ್ ಡಾಗ್ ಗಳೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಜೂನ್ 20 ರಂದು ಮಾನ್ಸೂನ್ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ 78 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ 50 ಜನರು ಮೇಘಸ್ಫೋಟ, ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟಿದ್ದಾರೆ. ಇದುವರೆಗೆ 121 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ, ಸೇನೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಮತ್ತು ಗೃಹರಕ್ಷಕ ದಳದ ಸುಮಾರು 250 ಸಿಬ್ಬಂದಿ, ಸ್ಥಳೀಯ ಆಡಳಿತ ಮತ್ತು ಸ್ಥಳೀಯ ಜನರೊಂದಿಗೆ ಸೇರಿ ಶೋಧ ಮತ್ತು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಅಲ್ಲದೆ ದುರ್ಗಮ ಪ್ರದೇಶಗಳಲ್ಲಿ 20 ತಂಡಗಳು ಮಾಹಿತಿ ಸಂಗ್ರಹಿಸಿ ಪಡಿತರ ಮತ್ತು ವೈದ್ಯಕೀಯ ಕಿಟ್ ವಿತರಿಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂತ್ರಸ್ತರಿಗೆ ಇದುವರೆಗೆ 1,538 ಪಡಿತರ ಕಿಟ್‌ಗಳನ್ನು ವಿತರಿಸಲಾಗಿದ್ದು, ತಕ್ಷಣವೇ 12.44 ಲಕ್ಷ ರೂ. ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲದೇ ತುನಾಗ್ ಮತ್ತು ಜಾಂಜೆಲಿ ಪ್ರದೇಶಗಳಿಗೆ ರೂ. 5 ಲಕ್ಷ ಹೆಚ್ಚುವರಿ ಹಣ ಕಳುಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ದುರಂತದಲ್ಲಿ ಸುಮಾರು 225 ಮನೆಗಳು, ಏಳು ಅಂಗಡಿಗಳು, 243 ಗೋಶಾಲೆಗಳು, 31 ವಾಹನಗಳು, 14 ಸೇತುವೆಗಳು ಮತ್ತು ಹಲವಾರು ರಸ್ತೆಗಳು ಹಾನಿಗೊಳಗಾಗಿವೆ. ಇತ್ತೀಚಿನ ವರದಿಯ ಪ್ರಕಾರ ಒಟ್ಟು 215 ಜಾನುವಾರುಗಳು ಸಾವನ್ನಪ್ಪಿದ್ದು, 494 ಜನರನ್ನು ರಕ್ಷಿಸಲಾಗಿದೆ.
ಭಾನುವಾರ ಸಂಜೆಯವರೆಗೆ ರಾಜ್ಯದಲ್ಲಿ 243 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅದರಲ್ಲಿ 183 ಮಂಡಿ ಜಿಲ್ಲೆಯಲ್ಲಿವೆ. ಅಲ್ಲದೇ ಹಿಮಾಚಲ ಪ್ರದೇಶದಲ್ಲಿ 241 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 278 ನೀರು ಸರಬರಾಜು ಯೋಜನೆಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯಿಂದ ಇದುವರೆಗೆ ಅಂದಾಜು 572 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಾಹಿತಿ ಸಂಗ್ರಹ ಇನ್ನೂ ನಡೆಯುತ್ತಿದ್ದು, ಪ್ರವಾಹದಿಂದ ಆಗಿರುವ ಹಾನಿ ಸುಮಾರು 700 ಕೋಟಿಯಷ್ಟಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.