ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ರೇವದಂಡ ಕರಾವಳಿಯಲ್ಲಿ ಅನುಮಾನಾಸ್ಪದ ಬೋಟ್ ವೊಂದು ಪತ್ತೆಯಾದ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಭಾನುವಾರ ರಾತ್ರಿ ರೇವದಂಡ ಕೊರ್ಲೈ ಕರಾವಳಿಯಿಂದ ಎರಡು ನಾಟಿಕಲ್ ಮೈಲು ದೂರದಲ್ಲಿ ಅಪರಿಚಿತ ದೋಣಿಯನ್ನು ಭದ್ರತಾ ಸಿಬ್ಬಂದಿ ನೋಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಹುಶ: ಅದು ಪಾಕಿಸ್ತಾನದ ಮೀನುಗಾರಿಕಾ ಬೋಟ್ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್) ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆ, ಕ್ಷಿಪ್ರ ಪ್ರತಿಕ್ರಿಯೆ ತಂಡ ಭಾನುವಾರ ರಾತ್ರಿಯೇ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿವೆ.
ಈ ಮಧ್ಯೆ ರಾಯಗಢ ಪೊಲೀಸ್ ಅಧೀಕ್ಷಕ ಅಂಚಲ್ ದಲಾಲ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಕರಾವಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ರಾತ್ರಿ ಭಾರಿ ಮಳೆ ಮತ್ತು ಬಲವಾದ ಗಾಳಿ ಬೀಸಿದ್ದರಿಂದ ಅವರು ಬೋಟ್ ಇರುವ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.