ನವದೆಹಲಿ: ವೈವಾಹಿಕ ವಿವಾದಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ರಹಸ್ಯವಾಗಿ ರೆಕಾರ್ಡ್ ಮಾಡಿದ ಸಂಗಾತಿಯ ದೂರವಾಣಿ ಸಂಭಾಷಣೆಯನ್ನು ಸ್ವೀಕಾರಾರ್ಹ ಸಾಕ್ಷ್ಯವೆಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಸಂಗಾತಿಯ ದೂರವಾಣಿ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡುವುದು ಗೌಪ್ಯತೆಯ ಉಲ್ಲಂಘನೆಯಾಗಿದೆ ಮತ್ತು ಕೌಟುಂಬಿಕ ನ್ಯಾಯಾಲಯದಲ್ಲಿ ಅದನ್ನು ಸಾಕ್ಷ್ಯವಾಗಿ ಸ್ವೀಕರಿಸಲು ಆಗುವುದಿಲ್ಲ ಎಂಬ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ತೀರ್ಪನ್ನು ನೀಡುವಾಗ ನ್ಯಾಯಮೂರ್ತಿ ಬಿವಿ ನಾಗರತ್ನ ಅವರು, ಖಾಸಗಿ ಸಂಭಾಷಣೆಗಳನ್ನು ಕಾನೂನು ಸಾಕ್ಷ್ಯವಾಗಿ ಬಳಸುವುದಕ್ಕೆ ಅನುಮತಿ ನೀಡುವುದರಿಂದ ಕುಟುಂಬದ ಸಾಮರಸ್ಯ ಕದಡಬಹುದು ಮತ್ತು ವೈವಾಹಿಕ ಸಂಬಂಧಗಳಿಗೆ ಹಾನಿ ಮತ್ತು ಸಂಗಾತಿಗಳ ಮೇಲೆ ಕಣ್ಣಿಡಲು ಪ್ರೋತ್ಸಾಹಿಸುತ್ತದೆ ಎಂದು ಕೆಲವರು ವಾದಿಸಿದ್ದಾರೆ. 'ಆದರೆ, ಅಂತಹ ವಾದವು ಸಮರ್ಥನೀಯ ಎಂದು ನಾವು ಭಾವಿಸುವುದಿಲ್ಲ. ಸಂಗಾತಿಗಳು ಪರಸ್ಪರ ಸಕ್ರಿಯವಾಗಿ ಒಬ್ಬರ ಮೇಲೊಬ್ಬರು ಕಣ್ಣಿಡುವ ಹಂತಕ್ಕೆ ತಲುಪಿದ್ದರೆ, ಅದು ಸ್ವತಃ ಮುರಿದ ಸಂಬಂಧದ ಲಕ್ಷಣವಾಗಿದೆ ಮತ್ತು ಅವರ ನಡುವಿನ ನಂಬಿಕೆಯ ಕೊರತೆಯನ್ನು ಸೂಚಿಸುತ್ತದೆ' ಎಂದು ಹೇಳಿದರು. ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಕೂಡ ಪೀಠದಲ್ಲಿದ್ದರು.
ಹಿಂದೂ ವಿವಾಹ ಕಾಯ್ದೆ 1955 ರ ಸೆಕ್ಷನ್ 13ರ ಅಡಿಯಲ್ಲಿ ವಿಚ್ಛೇದನ ಪ್ರಕರಣ ಭಟಿಂಡಾ ಕೌಟುಂಬಿಕ ನ್ಯಾಯಾಲಯದ ಮುಂದಿತ್ತು. ಪತಿ ತನ್ನ ಹೆಂಡತಿಯ ಮೇಲೆ ಕ್ರೌರ್ಯದ ಆರೋಪ ಹೊರಿಸಿ, ತನ್ನ ಆರೋಪವನ್ನು ಸಾಬೀತುಪಡಿಸಲು ರಹಸ್ಯವಾಗಿ ರೆಕಾರ್ಡ್ ಮಾಡಿದ ಫೋನ್ ಸಂಭಾಷಣೆಗಳನ್ನು ಉಲ್ಲೇಖಿಸಿದ್ದನು. ಕೌಟುಂಬಿಕ ನ್ಯಾಯಾಲಯವು ಈ ರೆಕಾರ್ಡಿಂಗ್‌ಗಳಿರುವ ಸಿಡಿಯನ್ನು ಸಾಕ್ಷಿಯಾಗಿ ಪರಿಗಣಿಸಿತು. ಆದರೆ, ಪತ್ನಿ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ತನ್ನ ಒಪ್ಪಿಗೆಯಿಲ್ಲದೆ ಕರೆಗಳನ್ನು ರೆಕಾರ್ಡ್ ಮಾಡಲಾಗಿದೆ ಮತ್ತು ಅವುಗಳನ್ನು ಪುರಾವೆಯಾಗಿ ಪರಿಗಣಿಸುವುದು ತನ್ನ ಗೌಪ್ಯತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದರು.
ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತು. ಕಾಲ್ ರೆಕಾರ್ಡ್ ಮಾಡುವ ವೇಳೆ ಬರುವ ಪ್ರತಿಕ್ರಿಯೆಗಳು ಮತ್ತು ಅವರು ಯಾವ ಸಂದರ್ಭಗಳಲ್ಲಿ ಹೇಳಿಕೆ ನೀಡಿದ್ದರು ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ ಎಂದು ಪೀಠ ಹೇಳಿದೆ. ತಮ್ಮ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದೆ ಮತ್ತು ಅದನ್ನು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಪರಿಶೀಲಿಸಬಹುದು ಎಂಬ ಅರಿವು ಇಲ್ಲದೆಯೇ ಸಂಗಾತಿ ಬಹಿರಂಗವಾಗಿ ಮಾತನಾಡಿರುತ್ತಾರೆ ಎಂದು ಹೈಕೋರ್ಟ್ ಹೇಳಿತು. ಪತಿ ಈ ತೀರ್ಪನ್ನು ಪ್ರಶ್ನಿಸಿ ಉನ್ನತ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ಅವರ ಪರವಾಗಿ ತೀರ್ಪು ನೀಡಿದೆ.