ಮುಂಬೈ: ಇಂದು ಮಂಗಳವಾರ ಬೆಳಗ್ಗೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಗೆ(BSE) ಬೆದರಿಕೆ ಇಮೇಲ್ ಬಂದಿದ್ದು, ಅದರಲ್ಲಿ ಬಿಎಸ್ಇಯ ಟವರ್ ಕಟ್ಟಡವನ್ನು ನಾಲ್ಕು ಆರ್ ಡಿಎಕ್ಸ್ ಐಇಡಿ ಬಾಂಬ್ ಗಳನ್ನು ಬಳಸಿ ಸ್ಫೋಟಿಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಸ್ನೇಹಿತ ಪಿಣರಾಯಿ ವಿಜಯನ್" ಹೆಸರಿನ ಇಮೇಲ್ ಐಡಿಯಿಂದ ಈ ಬೆದರಿಕೆ ಇಮೇಲ್ ಬಂದಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನ ಟವರ್ ಬಿಲ್ಡಿಂಗ್ ನಲ್ಲಿ 4 ಆರ್ ಡಿಎಕ್ಸ್ ಐಇಡಿ ಬಾಂಬ್ ಗಳನ್ನು ಇರಿಸಲಾಗಿದ್ದು, ಮಧ್ಯಾಹ್ನ 3 ಗಂಟೆಗೆ ಸ್ಫೋಟಗೊಳ್ಳಲಿದೆ ಎಂದು ಇಮೇಲ್ ಬೆದರಿಕೆ ಹಾಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಬಂದ ತಕ್ಷಣ ಬೆದರಿಕೆ ಇಮೇಲ್ ಬಗ್ಗೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲಾಯಿತು, ನಂತರ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆವರಣದಲ್ಲಿ ವ್ಯಾಪಕ ಶೋಧ ನಡೆಸಿದ ಮೇಲೆ, ಅನುಮಾನಾಸ್ಪದ ಏನೂ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾತಾ ರಮಾಬಾಯಿ ಅಂಬೇಡ್ಕರ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ ಸೆಕ್ಷನ್ 351(1)(ಬಿ), 353(2), 351(3), 351(4) ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಮೇಲ್ ಕಳುಹಿಸಿದವರನ್ನು ಪತ್ತೆಹಚ್ಚಲು ಮತ್ತು ಶಂಕಿತನನ್ನು ಬಂಧಿಸಲು ಪೊಲೀಸರು ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ.