ನವದೆಹಲಿ: ಪ್ರಾಧ್ಯಾಪಕರೊಬ್ಬರ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದು, ಪ್ರಕರಣ ಸಂಬಂಧ ಸರ್ಕಾರದ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿಯವರು, ಒಡಿಶಾದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ವಿದ್ಯಾರ್ಥಿನಿಯ ಸಾವು, ಬಿಜೆಪಿ ವ್ಯವಸ್ಥೆಯಿಂದ ನಡೆದ ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ.
ಧೈರ್ಯಶಾಲಿ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಳು. ಆದರೆ, ನ್ಯಾಯದ ಬದಲು, ಆಕೆಗೆ ಪದೇ ಪದೇ ಬೆದರಿಕೆ, ಕಿರುಕುಳ ಮತ್ತು ಅವಮಾನ ಮಾಡಲಾಯಿತು. ಆಕೆಯನ್ನು ರಕ್ಷಿಸಬೇಕಾದವರೇ ಆಕೆ ಕುಗ್ಗುವಂತೆ ಮಾಡಿದರು. ಯಾವಾಗಲೂ ಆಗುವಂತೆಯೇ ಈಗಲೂ ಬಿಜೆಪಿ ವ್ಯವಸ್ಥೆಯು ಆರೋಪಿಗಳನ್ನು ರಕ್ಷಿಸಿದೆ. ಮತ್ತೊಬ್ಬ ಮುಗ್ಧ ಯುವತಿ ಬೆಂಕಿ ಹಚ್ಚಿಕೊಳ್ಳುವಂತಾಯಿತು. ಇದು ಆತ್ಮಹತ್ಯೆಯಲ್ಲ, ವ್ಯವಸ್ಥೆಯೇ ಆಯೋಜಿಸಿರುವ ಕೊಲೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಮೋದಿಯವರೇ ಒಡಿಶಾ ಆಗಿರಲಿ ಅಥವಾ ಮಣಿಪುರ ಆಗಿರಲಿ, ದೇಶದ ಹೆಣ್ಣುಮಕ್ಕಳು ಬೆಂಕಿಯಲ್ಲಿ ಬೆಂದು ಸಾಯುತ್ತಿದ್ದಾರೆ. ಆದರೆ, ನೀವು ಮೌನವಾಗಿ ಕುಳಿತಿದ್ದೀರಿ. ದೇಶವು ಉತ್ತರಗಳನ್ನು ಬಯಸುತ್ತಿದೆಯೇ ವಿನಃ ನಿಮ್ಮ ಮೌನವನ್ನಲ್ಲ. ಭಾರತದ ಹೆಣ್ಣುಮಕ್ಕಳಿಗೆ ಭದ್ರತೆ ಮತ್ತು ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.
ಏತನ್ಮಧ್ಯೆ ಒಡಿಶಾದ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಖಂಡಿಸಿ, ಕಾಂಗ್ರೆಸ್ ನೇತೃತ್ವದ ಎಂಟು ವಿರೋಧ ಪಕ್ಷಗಳು ವಿದ್ಯಾರ್ಥಿನಿಯ ಸಾವಿಗೆ ಖಂಡನೆ ವ್ಯಕ್ತಪಡಿಸಿ, ಪ್ರತಿಭಟಿಸಲು ಜುಲೈ 17 ರಂದು ಒಡಿಶಾ ಬಂದ್‌ಗೆ ಕರೆ ನೀಡಿವೆ.
ಎಂಟು ಪಕ್ಷಗಳು ಬಂದ್‌ಗೆ ಬೆಂಬಲ ನೀಡುತ್ತಿವೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಅವರು ಹೇಳಿದ್ದಾರೆ.
ಬಾಲಸೋರ್‌ನ ಫಕೀರ್ ಮೋಹನ್ (ಸ್ವಾಯತ್ತ) ಕಾಲೇಜಿನಲ್ಲಿ ನಡೆದ ಘಟನೆಯು ಮಹಿಳೆಯರನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬುದನ್ನು ತೋರಿಸಿದೆ. ವಿದ್ಯಾರ್ಥಿನಿ ಪೆಟ್ರೋಲ್ ತಂದು ಮೈಮೇಲೆ ಸುರಿದುಕೊಳ್ಳುತ್ತಿದ್ದರೂ ಮೌನವಾಗಿಯೇ ನೋಡಿಕೊಂಡಿದ್ದಾರೆ. ಯಾರೂ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದ್ದಾರೆ.
ಈ ನಡುವೆ ಮೃತ ವಿದ್ಯಾರ್ಥಿಯ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು, ಗ್ರಾಮಸ್ಥರ ಸಮ್ಮುಖದಲ್ಲಿ ಬಾಲಸೋರ್ ನಲ್ಲಿ ನಡೆಸಲಾಗಿದೆ. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.
ಬಾಲಸೋರ್ ಸಂಸದ ಪ್ರತಾಪ್ ಸಾರಂಗಿ, ಜಿಲ್ಲಾಧಿಕಾರಿಗಳು ಮತ್ತು ಇತರರು ವಿದ್ಯಾರ್ಥಿನಿಯ ಮನೆಯಿಂದ ಸ್ಮಶಾನದವರೆಗೂ ನಡೆದು ಸಾಗಿದರು.
ಬಾಲಸೋರ್‌ನ ಫಕೀರ್ ಮೋಹನ್ (ಸ್ವಾಯತ್ತ) ಕಾಲೇಜಿನ 20 ವರ್ಷದ ದ್ವಿತೀಯ ವರ್ಷದ ಬಿ.ಎಡ್ ವಿದ್ಯಾರ್ಥಿನಿ ಪ್ರಾಧ್ಯಾಪಕ ಸಮಿರಾ ಕುಮಾರ್ ಸಾಹು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಳು.
ಆದರೆ, ಆತನ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಶನಿವಾರ ಪ್ರತಿಭಟನೆಗಿಳಿದಿದ್ದಳು. ಬಳಿಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಈವೇಳೆ ಆಕೆಯನ್ನು ರಕ್ಶಷಿಸಿ ಬಾಲಸೋರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಭುವನೇಶ್ವರದ ಏಮ್ಸ್'ಗೆ ಸ್ಥಳಾಂತರಿಸಲಾಗಿತ್ತು. ವಿದ್ಯಾರ್ಥಿನಿ ಶೇ.95ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಳು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾಳೆ.
ಘಟನೆ ಬೆನ್ನಲ್ಲೇ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮಂಗಳವಾರ ವಿದ್ಯಾರ್ಥಿನಿಯ ಕುಟುಂಬಕ್ಕೆ 20 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.
ಅಲ್ಲದೆ, ಘಟನೆ ಸಂಬಂಧ ಸೂಕ್ತ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.