ನವದೆಹಲಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ಹಿಂದಿ ಪಾಕಿಸ್ತಾನದ ಕೈವಾಡ ಇರುವುದು ಬಹಿರಂಗವಾಗಿದೆ
ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿಯ ಉನ್ನತ ಅಧಿಕಾರಿಗಳ ಸೂಚನೆ ಮೇರೆಗೆ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್ಐ) ಮತ್ತು ನಿಷೇಧಿತ ಲಷ್ಕರ್-ಎ-ತೈಬಾ(ಎಲ್‌ಇಟಿ) ಉಗ್ರ ಸಂಘಟನೆ ಜಂಟಿಯಾಗಿ ರೂಪಿಸಿದ "ಪಿತೂರಿ" ಎಂದು ಭದ್ರತಾ ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಐಎಸ್‌ಐ, ಲಷ್ಕರ್ ಕಮಾಂಡರ್ ಸಾಜಿದ್ ಜಟ್ ಗೆ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ನೀಡಲಾಗಿತ್ತು ಮತ್ತು ರಹಸ್ಯವನ್ನು ಕಾಪಾಡಿಕೊಳ್ಳಲು ವಿದೇಶಿ ಭಯೋತ್ಪಾದಕರನ್ನು ಬಳಸಿಕೊಳ್ಳುವಂತೆ ಸೂಚಿಸಿತ್ತು ಎಂದು ಮೂಲಗಳು ತಿಳಿಸಿವೆ.
"ಯಾವುದೇ ಕಾಶ್ಮೀರಿ ಭಯೋತ್ಪಾದಕರನ್ನು ಈ ದಾಳಿಗೆ ಬಳಸಿಕೊಳ್ಳಲಾಗಿಲ್ಲ ಮತ್ತು ಈ ಕಾರ್ಯಾಚರಣೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಸಕ್ರಿಯವಾಗಿರುವ ವಿದೇಶಿ ಎಲ್‌ಇಟಿ ಉಗ್ರರನ್ನು ಈ ಹತ್ಯಾಕಾಂಡಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಸ್ಥಳೀಯ ಬೆಂಬಲವು ಆಶ್ರಯ ಮತ್ತು ಲಾಜಿಸ್ಟಿಕ್ಸ್‌ಗೆ ಮಾತ್ರ ಸೀಮಿತವಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
"ಯಾವುದೇ ಸ್ಥಳೀಯ ಭಯೋತ್ಪಾದಕರು ಈ ಭೀಕರ ಹತ್ಯೆಯಲ್ಲಿ ಭಾಗಿಯಾಗಿಲ್ಲ ಅಥವಾ ಭಯೋತ್ಪಾದಕ ಸಂಚಿನ ನಿಖರವಾದ ವಿವರಗಳ ಬಗ್ಗೆ ಮಾಹಿತಿ ಇರಲಿಲ್ಲ" ಎಂದು ಅಧಿಕಾರಿ ಹೇಳಿದ್ದಾರೆ.
ಎಲ್‌ಇಟಿಯ ಒಂದು ಭಾಗವೆಂದು ವ್ಯಾಪಕವಾಗಿ ಪರಿಗಣಿಸಲ್ಪಡುವ ರೆಸಿಸ್ಟೆನ್ಸ್ ಫ್ರಂಟ್(ಟಿಆರ್‌ಎಫ್) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಎಲ್‌ಇಟಿಯ ಪಾತ್ರವನ್ನು ಮರೆಮಾಚಲು ಮತ್ತು ಅಂತರಾಷ್ಟ್ರೀಯ ಒತ್ತಡವನ್ನು ತಪ್ಪಿಸಲು ಪಾಕಿಸ್ತಾನವು ಟಿಆರ್‌ಎಫ್ ಅನ್ನು ಬಳಸುತ್ತಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಹೇಳಿಕೊಂಡಿವೆ.
ದಾಳಿಕೋರರನ್ನು ಪಾಕಿಸ್ತಾನಿ ಪ್ರಜೆಗಳಾದ ಹಾಶಿಮ್ ಮುಸಾ(ಅಲಿಯಾಸ್ ಸುಲೇಮಾನ್) ಮತ್ತು ಅಲಿ ಭಾಯ್ (ಅಲಿಯಾಸ್ ತಲ್ಹಾ ಭಾಯ್) ಮತ್ತು ಸ್ಥಳೀಯ ಉಗ್ರ ಆದಿಲ್ ಹುಸೇನ್ ಥೋಕರ್ ಎಂದು ಗುರುತಿಸಲಾಗಿದೆ. ಈ ಮೂವರಿಗೆ ಆಶ್ರಯ ನೀಡಿದ್ದಕ್ಕಾಗಿ ಇತರ ಇಬ್ಬರು ಸ್ಥಳೀಯರನ್ನು - ಪರ್ವೈಜ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಜೋಥರ್ ನನ್ನು ಬಂಧಿಸಲಾಗಿದೆ.
ದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ), ಪರ್ವೈಜ್ ಮತ್ತು ಬಶೀರ್ ಭಯೋತ್ಪಾದಕರ ನಂಟಿನ ಬಗ್ಗೆ ತಿಳಿದಿತ್ತು. ಆದರೆ ದಾಳಿಗೆ ಮುಂಚಿನ ದಿನ ಆಶ್ರಯ, ಆಹಾರ ಮತ್ತು ವ್ಯವಸ್ಥಾಪನಾ ಬೆಂಬಲವನ್ನು ಒದಗಿಸಿದ್ದರು ಎಂದು ಹೇಳಿದೆ.