ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು RSS ಕಾರ್ಯಕರ್ತರ ಆಕ್ಷೇಪಾರ್ಹ ವ್ಯಂಗ್ಯಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಆರೋಪಕ್ಕೆ ಗುರಿಯಾಗಿದ್ದ ವ್ಯಂಗ್ಯ ಚಿತ್ರಕಾರನಿಗೆ ಸುಪ್ರೀಂ ಕೋರ್ಟ್ ಮಂಗಳವಾರ ವಾರ್ನಿಂಗ್ ನೀಡುವುದರೊಂದಿಗೆ ರಕ್ಷಣೆ ನೀಡಿದೆ.
ಇದೇ ರೀತಿಯಲ್ಲಿ ಇನ್ನೂ ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಆಕ್ಷೇಪಾರ್ಹ ಫೋಸ್ಟ್ ಗಳನ್ನು ಹಂಚಿಕೊಂಡರೆ ಕಾನೂನಿನ ಅಡಿಯಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ರಾಜ್ಯವು ಸ್ವತಂತ್ರವಾಗಿದೆ ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಎಚ್ಚರಿಕೆ ನೀಡಿದೆ.
ನಿಂದನೀಯ ಆನ್ ಲೈನ್ ಫೋಸ್ಟ್ ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, "ಲೋಗ್ ಕಿಸಿ ಕೋ ಭಿ, ಕುಚ್ ಭೀ ಕೆಹ್ ದೇತೆ ಹೈಂ (ಜನರು ಯಾರಿಗಾದರೂ ಏನು ಬೇಕಾದರೂ ಹೇಳುತ್ತಾರೆ) ಎಂದು ಹೇಳಿತು.
ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿ ಜುಲೈ 3 ರಂದು ಮಧ್ಯಪ್ರದೇಶ ಹೈಕೋರ್ಟ್ ನೀಡಿದ ಆದೇಶವನ್ನು ವ್ಯಂಗ್ಯ ಚಿತ್ರಕಾರ ಹೇಮಂತ್ ಮಾಳವೀಯ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಕೀಲ ಮತ್ತು ಆರೆಸ್ಸೆಸ್ ಕಾರ್ಯಕರ್ತ ವಿನಯ್ ಜೋಶಿ ಅವರು ನೀಡಿದ ದೂರಿನ ಮೇರೆಗೆ ಇಂದೋರ್‌ನ ಲಸುಡಿಯಾ ಪೊಲೀಸ್ ಠಾಣೆಯಿಂದ ಮೇ ತಿಂಗಳಲ್ಲಿ ಹೇಮಂತ್ ಮಾಳವೀಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಮಾಳವೀಯ ಅವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವ್ಯಂಗ್ಯ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ.
ಹಿಂದೂಗಳ ಪವಿತ್ರ ದೇವರು ಶಿವನ ಕುರಿತು ಅನುಚಿತವಾದ ಹೇಳಿಕೆ, ಕಾರ್ಟೂನ್ ಗಳು, ಅಲ್ಲದೇ ಮೋದಿ, ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಸಂಬಂಧಿಸಿದ ಕಾರ್ಟೂನ್‌ಗಳು, ವಿಡಿಯೋಗಳು, ಫೋಟೋಗಳು ಮತ್ತು ಹೇಳಿಕೆಗೆ ಸಂಬಂಧಿಸಿದಂತೆ ವಿವಿಧ ಆಕ್ಷೇಪಾರ್ಹ ಫೋಸ್ಟ್ ಗಳನ್ನು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.