ಪಹಲ್ಗಾಮ್ ಉಗ್ರ ದಾಳಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ 
ದೇಶ

Pahalgam Attack ರೂವಾರಿ TRF ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಣೆ: S Jaishankar ಹೇಳಿದ್ದೇನು?

ಡೊನಾಲ್ಡ್ ಟ್ರಂಪ್ ಸರ್ಕಾರವು ರೆಸಿಸ್ಟೆಂನ್ಸ್​ ಫ್ರಂಟ್(ಟಿಆರ್​ಎಫ್​) ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದು, ಈ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಈ ಮಾಹಿತಿಯನ್ನು ನೀಡಿದ್ದಾರೆ.

ನವದೆಹಲಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಅಂಗ ಸಂಘಟನೆ ರೆಸಿಸ್ಟೆಂನ್ಸ್​ ಫ್ರಂಟ್(TRF​) ಅನ್ನು ಅಮೆರಿಕ ಜಾಗತಿಕ ಉಗ್ರ ಸಂಘಟನೆ ಎಂದು ಘೋಷಣೆ ಮಾಡಿದ್ದು ವೈಟ್ ಹೌಸ್ ನಿರ್ಧಾರವನ್ನು ಭಾರತ ಸರ್ಕಾರ ಸ್ವಾಗತಿಸಿದೆ.

ಹೌದು.. ಡೊನಾಲ್ಡ್ ಟ್ರಂಪ್ ಸರ್ಕಾರವು ರೆಸಿಸ್ಟೆಂನ್ಸ್​ ಫ್ರಂಟ್(ಟಿಆರ್​ಎಫ್​) ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದು, ಈ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಈ ಮಾಹಿತಿಯನ್ನು ನೀಡಿದ್ದಾರೆ.

ಹಲವು ವರ್ಷಗಳಿಂದ, ಟಿಆರ್‌ಎಫ್ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ. ವಿಶೇಷವಾಗಿ, ಭದ್ರತಾ ಪಡೆಗಳ ಮೇಲಿನ ದಾಳಿಗಳು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಗುರಿ ಹತ್ಯೆಗಳು ಟಿಆರ್‌ಎಫ್‌ನ ಕಾರ್ಯತಂತ್ರದ ಭಾಗವಾಗಿದೆ. ಕಾಶ್ಮೀರಿಯೇತರ ನಾಗರಿಕರನ್ನು ಟಿಆರ್‌ಎಫ್ ವಿಶೇಷವಾಗಿ ಗುರಿಯಾಗಿಸಿಕೊಂಡಿದೆ.

ಭಾರತದ ಪಹಲ್ಗಾಮ್ ಉಗ್ರದಾಳಿ ರೂವಾರಿ

ಇನ್ನು ಕಳೆದ ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು 26 ಪ್ರವಾಸಿಗರನ್ನು ಗುಂಡಿಕ್ಕಿ ಕೊಂದಿದ್ದರು. ಈ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಇದೇ ಟಿಆರ್‌ಎಫ್ ಸಂಘಟನೆ ಹೊತ್ತು ಕೊಂಡಿತ್ತು. ಪಾಕಿಸ್ತಾನ ಮೂಲದ ಈ ಟಿಆರ್ ಎಫ್ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಅಡಿಯಲ್ಲಿ ಈ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಟಿಆರ್‌ಎಫ್ ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದಾರೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯು 2008 ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿಯಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ TRF ಅನ್ನು ವಿದೇಶಿ ಭಯೋತ್ಪಾದನಾ ಸಂಘಟನೆ ಎಂದು ಅಮೆರಿಕ ಹೆಸರಿಸುವುದರಿಂದ ಅದರ ಸದಸ್ಯರ ಮೇಲೆ ಕಠಿಣ ಆರ್ಥಿಕ ಮತ್ತು ಪ್ರಯಾಣ ನಿರ್ಬಂಧಗಳನ್ನು ವಿಧಿಸುತ್ತದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕ ಭಾರತದ ಜೊತೆ ನಿಲ್ಲುತ್ತದೆ ಮತ್ತು ಭಾರತಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ಅವರು ಹೇಳಿದರು. ಅಂತೆಯೇ ಈ ಕ್ರಮವು ಅಮೆರಿಕದ ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ವಿರುದ್ಧದ ಹೋರಾಟ ಮತ್ತು ಭಾರತದೊಂದಿಗಿನ ಸಹಕಾರಕ್ಕೆ ಪುರಾವೆಯಾಗಿದೆ ಎಂದು ಅವರು ಹೇಳಿದರು.

ಭಾರತ ಸ್ವಾಗತ

ಇನ್ನು TRF ಅನ್ನು ವಿದೇಶಿ ಭಯೋತ್ಪಾದನಾ ಸಂಘಟನೆ ಎಂದು ಅಮೆರಿಕ ಘೋಷಣೆ ಮಾಡಿದ ಕ್ರಮವನ್ನು ಭಾರತ ಸ್ವಾಗತಿಸಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣವಾದ ಟಿಆರ್‌ಎಫ್ ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದಕ್ಕಾಗಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಅಮೆರಿಕವನ್ನು ಶ್ಲಾಘಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಎಸ್ ಜೈಶಂಕರ್, 'ಭಾರತ-ಅಮೆರಿಕ ಭಯೋತ್ಪಾದನಾ ನಿಗ್ರಹ ಸಹಕಾರದ ಬಲವಾದ ದೃಢೀಕರಣ. ಲಷ್ಕರ್-ಎ-ತಯ್ಯಿಬಾ (LeT) ಪ್ರಾಕ್ಸಿ ಅಥವಾ ಅದರ ಅಂಗಸಂಘಟನೆ TRF ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ (FTO) ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ (SDGT) ಎಂದು ಗೊತ್ತುಪಡಿಸಿದ್ದಕ್ಕಾಗಿ ಅಮೆರಿಕ ಸರ್ಕಾರವನ್ನು ಅನ್ನು ಶ್ಲಾಘಿಸುತ್ತೇವೆ. ಏಪ್ರಿಲ್ 22 ರ ಪಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ಅದು ವಹಿಸಿಕೊಂಡಿದೆ.

ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ. #OpSindoor." ಎಂದು ಅವರು ಟ್ವೀಟ್ ಮಾಡಿದ್ದಾರೆ.

ಭಾರತಕ್ಕೆ ಅತಿ ದೊಡ್ಡ ರಾಜತಾಂತ್ರಿಕ ಗೆಲುವು

ಇನ್ನು ಪಹಲ್ಗಾಮ್ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಸರ್ಕಾರ ಮೊದಲಿನಿಂದಲೂ ಆರೋಪ ಮಾಡುತ್ತಲೇ ಬಂದಿತ್ತು. ಇದೀಗ ಸ್ವತಃ ಅಮೆರಿಕ ಸರ್ಕಾರ ಟಿಆರ್ ಎಫ್ ಅನ್ನು ಜಾಗತಿಕ ಉಗ್ರ ಸಂಘಟನೆ ಎಂದು ಘೋಷಿಸಿರುವುದು ಭಾರತಕ್ಕೆ ಸಿಕ್ಕ ಅತಿದೊಡ್ಡ ರಾಜತಾಂತ್ರಿಕ ಗೆಲುವಾಗಿದೆ. ಇದೀಗ ಟಿಆರ್ ಎಫ್ ಅನ್ನು ಜಾಗತಿಕ ಉಗ್ರ ಸಂಘಟನೆ ಎಂದು ಪಟ್ಟಿ ಮಾಡಿರುವುದರಿಂದ ಟಿಆರ್‌ಎಫ್‌ ದೊರೆಯುತ್ತಿದ್ದ ಹಣಕಾಸು ನೆರವಿಗೂ ನಿಷೇಧ ಹೇರಿದಂತಾಗಿದೆ.

ಅಮೆರಿಕದ ವಿದೇಶಾಂಗ ಇಲಾಖೆಯು ಒಂದು ಸಂಘಟನೆಯ ಚಟುವಟಿಕೆಗಳನ್ನು ಪರಿಶೀಲಿಸಿದ ನಂತರ ಅದನ್ನು ವಿದೇಶಿ ಭಯೋತ್ಪಾದಕ ಸಂಘಟನೆ (ಎಫ್‌ಟಿಒ) ಎಂದು ಘೋಷಿಸುತ್ತದೆ. ಎಫ್‌ಟಿಒ ಮೂಲಕ ಭಯೋತ್ಪಾದಕ ಸಂಘಟನೆಗೆ ಹಣಕಾಸು ಒದಗಿಸುವುದನ್ನು ನಿಷೇಧಿಸಲಾಗಿದೆ.

ಇದಲ್ಲದೆ, ಈಗ ಯಾವುದೇ ವ್ಯಕ್ತಿ ಈ ಸಂಘಟನೆಗೆ ದೇಣಿಗೆ ಅಥವಾ ಯಾವುದೇ ರೀತಿಯ ಸಹಾಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ, ಅಮೆರಿಕವು ಇತರ ದೇಶಗಳಿಗೆ ಆ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತದೆ. ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲ್ಪಟ್ಟ ಸಂಘಟನೆಯು 30 ದಿನಗಳಲ್ಲಿ ಯುಎಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು. ಅಮೆರಿಕ ಸರ್ಕಾರವು ಪ್ರತಿ ಎರಡು ವರ್ಷಗಳಿಗೊಮ್ಮೆ ಎಫ್‌ಟಿಒ ಅನ್ನು ಪರಿಶೀಲಿಸುತ್ತದೆ.

ಅಂತೆಯೇ "ಭಯೋತ್ಪಾದನೆಯ ವಿರುದ್ಧದ ಹೋರಾಟ ಮತ್ತು ಭಯೋತ್ಪಾದಕ ಮೂಲಸೌಕರ್ಯಗಳನ್ನು ಕಿತ್ತುಹಾಕುವಲ್ಲಿ ಜಾಗತಿಕ ಸಹಕಾರದ ಅಗತ್ಯವನ್ನು ಭಾರತ ನಿರಂತರವಾಗಿ ಒತ್ತಿ ಹೇಳುತ್ತಾ ಬಂದಿದೆ. ಭಯೋತ್ಪಾದನೆ ನಿಗ್ರಹದಲ್ಲಿ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಆಳವಾದ ಸಹಕಾರವನ್ನು ಪ್ರತಿಬಿಂಬಿಸುವ ಒಂದು ಸಕಾಲಿಕ ಮತ್ತು ಪ್ರಮುಖ ಹೆಜ್ಜೆಯಾಗಿ ಟಿಆರ್‌ಎಫ್ ಅನ್ನು ನೇಮಿಸಲಾಗಿದೆ" ಎಂದು ವಿದೇಶಾಂಗ ಸಚಿವಾಲಯ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಸ್ರೇಲ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಜೆರುಸಲೆಮ್ ಬಸ್ ಮೇಲೆ ಗುಂಡಿನ ದಾಳಿ: 5 ಸಾವು, 12 ಜನರಿಗೆ ಗಾಯ

Nepal: ಸಾಮಾಜಿಕ ಮಾಧ್ಯಮ ಬ್ಯಾನ್ ವಿರುದ್ಧ ಪ್ರತಿಭಟನೆ; ಯುವಕರ ಮೇಲೆ ಪೊಲೀಸರ ಗುಂಡು; 19 ಮಂದಿ ಸಾವು; ಸೇನೆ ನಿಯೋಜನೆ; Video!

ಕೋಮು ಘರ್ಷಣೆ: ಸೆಪ್ಟೆಂಬರ್ 9 ರಂದು ಮದ್ದೂರು ಬಂದ್‌ಗೆ ಬಿಜೆಪಿ ಕರೆ

ನಾಳೆ ಉಪರಾಷ್ಟ್ರಪತಿ ಚುನಾವಣೆ: ಮತದಾನದಿಂದ BRS-BJD ದೂರ; ಇದು INDIA ಅಭ್ಯರ್ಥಿ ವಿರುದ್ಧ NDA ಅಭ್ಯರ್ಥಿ ಗೆಲುವಿಗೆ ವರವಾಗುತ್ತಾ?

ರಷ್ಯಾದಿಂದ ತೈಲ ಖರೀದಿ "ರಕ್ತದ ಹಣ": ಭಾರತದ ಮೇಲೆ ಮತ್ತೆ ಕಿಡಿ ಕಾರಿದ ವ್ಯಾಪಾರ ಸಲಹೆಗಾರ ಪೀಟರ್ ನವರೊ!

SCROLL FOR NEXT