ಪುಣೆ: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಪತ್ನಿ ಸಂಗೀತಾ ಬಿಜ್ಲಾನಿ ಅವರ ಲೋನಾವಾಲಾ ಬಂಗಲೆಯಲ್ಲಿ ಕಳ್ಳತನ ನಡೆದಿರುವ ಪ್ರಕರಣ ವರದಿಯಾಗಿದೆ.
ಪುಣೆ ಜಿಲ್ಲೆಯ ಮಾವಲ್ ತಾಲ್ಲೂಕಿನ ಟಿಕೋನಾ ಪೇತ್‌ನಲ್ಲಿರುವ ಅಜರುದ್ದೀನ್ ಅವರ ಬಂಗಲೆಯಲ್ಲಿ ಮಾರ್ಚ್ 7 ರಿಂದ ಜುಲೈ 18, 2025 ರ ನಡುವೆ ಕಳ್ಳತನ ನಡೆದಿದೆ ಎಂದು ಪುಣೆ ಗ್ರಾಮೀಣ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಪೊಲೀಸ್ ಹೇಳಿಕೆಯ ಪ್ರಕಾರ, ಅಪರಿಚಿತ ದುಷ್ಕರ್ಮಿಗಳು ಹಿಂಭಾಗದ ಕಾಂಪೌಂಡ್ ಗೋಡೆಯ ತಂತಿ ಜಾಲರಿಯನ್ನು ಕತ್ತರಿಸಿ ಬಂಗಲೆಯೊಳಗೆ ನುಗ್ಗಿ, ನಗದು, ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಕಳ್ಳರು ರೂ. 50,000 ನಗದು ಮತ್ತು ಸುಮಾರು ರೂ. 7,000 ರೂ ಮೌಲ್ಯದ ದೂರದರ್ಶನ ಸೆಟ್ ಅನ್ನು ಕದ್ದಿದ್ದಾರೆ. ಒಟ್ಟು ಅಂದಾಜು ರೂ. 57,000 ಕಳ್ಳತನವಾಗಿದೆ.
ಕಳ್ಳತನದ ಜೊತೆಗೆ, ಅಪರಾಧಿಗಳು ಮನೆಯೊಳಗಿನ ಆಸ್ತಿಯನ್ನು ಸಹ ಹಾನಿಗೊಳಿಸಿದ್ದಾರೆ. ಹೀಗಾಗಿ ಇದು ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯ ಎಂದು ಸೂಚಿಸುತ್ತದೆ.
ಅಜರುದ್ದೀನ್ ಅವರ 54 ವರ್ಷದ ಆಪ್ತ ಸಹಾಯಕ ಮೊಹಮ್ಮದ್ ಮುಜೀಬ್ ಖಾನ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಭಾಜಿನಗರ ನಿವಾಸಿ ಖಾನ್, ಮಾರ್ಚ್ 7 ರಿಂದ ಜುಲೈ 18, 2025 ರ ನಡುವೆ ಬಂಗಲೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಕಳ್ಳತನ ನಡೆದಿರಬಹುದು ಎಂದು ಹೇಳಿದ್ದಾರೆ.
ದೂರಿನ ನಂತರ, ಲೋನಾವಾಲ ಗ್ರಾಮೀಣ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಬಿಎನ್ಎಸ್ ಸೆಕ್ಷನ್ 331(3), 331(4), 305(ಎ), 324(4), ಮತ್ತು 324(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.