ಜಮ್ಮು ಮತ್ತು ಕಾಶ್ಮೀರ: ಪಾಕಿಸ್ತಾನದ ಹ್ಯಾಂಡ್ಲರ್‌ಗಳ ಸೂಚನೆಯ ಮೇರೆಗೆ ಭಯೋತ್ಪಾದನಾ ಚಟುವಟಿಕೆ ಆರೋಪದ ಮೇರೆಗೆ 10 ಜನರನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನದ ಹ್ಯಾಂಡ್ಲರ್‌ಗಳ ಸೂಚನೆಯ ಮೇರೆಗೆ ಉಗ್ರಗಾಮಿ ಚಟುವಟಿಕೆ ನಡೆಸಲು, ಹಣಕಾಸು ಒದಗಿಸಲು ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಆ್ಯಪ್ ಬಳಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಕಣಿವೆ ಪ್ರದೇಶದ ಅನೇಕ ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆಯಲ್ಲಿ ಬಂಧನ ನಡೆದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಪ್ರಕರಣದ ತನಿಖೆಯ ಸಂದರ್ಭದಲ್ಲಿ ಕಾಶ್ಮೀರದ ಬುದ್ಗಾಮ್, ಪುಲ್ವಾಮಾ, ಗಂದರ್‌ಬಾಲ್ ಮತ್ತು ಶ್ರೀನಗರ ಜಿಲ್ಲೆಗಳ 10 ಸ್ಥಳಗಳಲ್ಲಿ ಅನುಮಾನಾಸ್ಪದ ತಾಂತ್ರಿಕ ಸಹಿಗಳನ್ನು ಪತ್ತೆಹಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.
ಶಂಕಿತರು ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಆ್ಯಪ್ ಬಳಸುತ್ತಿರುವುದು ಕಂಡುಬಂದಿದೆ. ಇದನ್ನು ಉಗ್ರರ ನೇಮಕಾತಿ ಸೇರಿದಂತೆ ವಿವಿಧ ಭಯೋತ್ಪಾದಕ ಸಂಬಂಧಿತ ಚಟುವಟಿಕೆ ನಡೆಸಲು, ಹಣಕಾಸು ಪೂರೈಸಲು ಭಯೋತ್ಪಾದಕ ಹ್ಯಾಂಡ್ಲರ್‌ಗಳು ವ್ಯಾಪಕವಾಗಿ ಬಳಸುತ್ತಾರೆ ಎಂದು ಅವರು ಹೇಳಿದರು.