ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೆಡಿಯು ನಾಯಕತ್ವವನ್ನು ತಮ್ಮ ಪುತ್ರ ನಿಶಾಂತ್ ಕುಮಾರ್ ಗೆ ವರ್ಗಾಯಿಸುವಂತೆ ರಾಷ್ಟ್ರೀಯ ಲೋಕ ಮೋರ್ಚಾ (RLM) ಮುಖ್ಯಸ್ಥ ಉಪೇಂದ್ರ ಕುಶ್ವಾಹಾ ಮನವಿ ಮಾಡಿದ ಬೆನ್ನಲ್ಲೇ ಬಿಹಾರ ವಿಧಾನಪರಿಷತ್ ವಿಪಕ್ಷ ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿಯಾದ ರಾಬ್ರಿದೇವಿ ಸೋಮವಾರ ಇದೇ ರೀತಿ ಒತ್ತಾಯಿಸಿದ್ದಾರೆ.
ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ಮೊದಲ ದಿನ ವಿಧಾನಸಭೆ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಬ್ರಿದೇವಿ, ರಾಜ್ಯಾದ್ಯಂತ ಹೆಚ್ಚುತ್ತಿರುವ ಅಪರಾಧ ಘಟನೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ನಿತೀಶ್ ಸರ್ಕಾರವನ್ನು ನಡೆಸಲು ಸಾಧ್ಯವಾಗದಿದ್ದರೆ, ಜನರ ಹಿತದೃಷ್ಟಿಯಿಂದ ಮಗನಿಗೆ ಜವಾಬ್ದಾರಿಯನ್ನು ವಹಿಸಲಿ ಎಂದು ಹೇಳಿದರು.
ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಅಪರಾಧ ತಡೆಗಟ್ಟಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ನಿತೀಶ್ ಅವರು ಗೃಹ ಖಾತೆಯನ್ನು ಹೊಂದಿದ್ದು, ಅದಕ್ಕೆ ರಾಜೀನಾಮೆ ಸಲ್ಲಿಸಲು ಅವರು ಸಿದ್ಧರಿಲ್ಲ. ಹೀಗಾಗಿ ತನ್ನ ಪುತ್ರ ನಿಶಾಂತ್ ಅವರಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಲಿ ಎಂದು ರಾಬ್ರಿದೇವಿ ಒತ್ತಾಯಿಸಿದರು.
ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ವಿಚಾರ ಪ್ರಸ್ತಾಪಿಸಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದವು. ಇದೇ ವರ್ಷದ ಅಕ್ಟೋಬರ್-ನವೆಂಬರ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯುವುದರಿಂದ ಎನ್ ಡಿಎ ಸರ್ಕಾರದ ಕೊನೆಯ ಅಧಿವೇಶನ ಇದಾಗಿದೆ.
ಇಲ್ಲಿಯವರೆಗೂ ಸಕ್ರಿಯ ರಾಜಕಾರಣಕ್ಕೆ ಧುಮ್ಮುಕುವ ಉದ್ದೇಶ ಸ್ಪಷ್ಪಪಡಿಸದ ನಿಶಾಂತ್ ಕುಮಾರ್ ಗೆ ಜೆಡಿಯು ನಾಯಕತ್ವವನ್ನು ಹಸ್ತಾಂತರಿಸಬೇಕು ಎಂದು RLM ಮುಖ್ಯಸ್ಥ ರಾಬ್ರಿದೇವಿ ಭಾನುವಾರ ನಿತೀಶ್ ಕುಮಾರ್ ಅವರನ್ನು ಒತ್ತಾಯಿಸಿದ್ದರು.