ಅಹಮದಾಬಾದ್: ಭಾರತೀಯ ಉಪಖಂಡದಲ್ಲಿ ಅಲ್-ಖೈದಾ ಜೊತೆಗೆ ನಂಟು ಹೊಂದಿದ್ದ ಉಗ್ರ ಸಂಘಟನೆ (AQIS)ಯೊಂದನ್ನು ಪತ್ತೆ ಹಚ್ಚಿರುವ ಗುಜರಾತಿನ ಭಯೋತ್ಪಾದನಾ ನಿಗ್ರಹ ದಳ ಬುಧವಾರ ನಾಲ್ವರನ್ನು ಉಗ್ರರನ್ನು ಬಂಧಿಸಿದೆ.
ದೆಹಲಿ ಹಾಗೂ ನೊಯ್ಡಾದಿಂದ ಇಬ್ಬರು ಉಗ್ರರು ಹಾಗೂ ಗುಜರಾತಿನ ಅಹಮದಾಬಾದ್ ಮತ್ತು ಮೊದಸಾದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ನಾಲ್ವರು ಭಯೋತ್ಪಾದಕರನ್ನು ಮೊಹಮ್ಮದ್ ಫೈಕ್, ಮೊಹಮ್ಮದ್ ಫರ್ದೀನ್, ಸೆಫುಲ್ಲಾ ಕುರೇಶಿ ಮತ್ತು ಜೀಶನ್ ಅಲಿ ಎಂದು ಗುರುತಿಸಲಾಗಿದೆ.
ಎಲ್ಲಾ ಭಯೋತ್ಪಾದಕರು 20-25 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಶದಲ್ಲಿ ದೊಡ್ಡ ದಾಳಿ ನಡೆಸಲು ಸಂಚು ರೂಪಿಸಿದ್ದ ನಾಲ್ವರು ಭಯೋತ್ಪಾದಕರು ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಈ ಕುರಿತು ಮುಂದಿನ ತನಿಖೆ ನಡೆಯುತ್ತಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ.
AQISನೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದನಾ ಘಟಕವನ್ನು ಗುಜರಾತ್ ಎಟಿಎಸ್ ಬಂಧಿಸಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ನಾಲ್ವರನ್ನು ಬಂಧಿಸಲಾಗಿದೆ" ಎಂದು ಗುಜರಾತ್ ATS ಹೇಳಿಕೆಯಲ್ಲಿ ತಿಳಿಸಿದೆ.
ದೆಹಲಿ ಪೊಲೀಸರು ಕಳೆದ ವರ್ಷ ಆಗಸ್ಟ್‌ನಲ್ಲಿ ಅಲ್-ಖೈದಾದೊಂದಿಗೆ ಸಂಪರ್ಕ ಹೊಂದಿದ್ದ ಇದೇ ರೀತಿಯ ಭಯೋತ್ಪಾದಕ ಘಟಕವನ್ನು ಪತ್ತೆ ಹಚ್ಚಿದ್ದರು. ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ರಾಜಸ್ಥಾನದಿಂದ 14 ಭಯೋತ್ಪಾದಕರನ್ನು ಬಂಧಿಸಿದ್ದರು.