ನವದೆಹಲಿ: ಈ ವರ್ಷದ ಮೊದಲ ಆರು ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 26,770 ಜನರು ಸಾವಿಗೀಡಾಗಿದ್ದಾರೆ ಎಂದು ಬುಧವಾರ ಸಂಸತ್ತಿಗೆ ತಿಳಿಸಲಾಯಿತು.
ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 2024ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ (ಎನ್‌ಎಚ್) 52,609 ಮಾರಕ ಅಪಘಾತಗಳು ಸಂಭವಿಸಿವೆ ಎಂದು ಹೇಳಿದರು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಹೆಚ್ಚಿನ ಸಂಚಾರ ದಟ್ಟಣೆ ಇರುವ ರಾಷ್ಟ್ರೀಯ ಹೆದ್ದಾರಿ ಮತ್ತು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ, ಟ್ರಾನ್ಸ್-ಹರಿಯಾಣ, ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ, ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯಂತಹ ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳಲ್ಲಿ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆ (ಎಟಿಎಂಎಸ್) ಅನ್ನು ಸ್ಥಾಪಿಸಿದೆ ಎಂದು ಗಡ್ಕರಿ ಸದನಕ್ಕೆ ತಿಳಿಸಿದರು.
'ATMS (ಅಡ್ವಾನ್ಸ್ಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್) ವಿವಿಧ ಎಲೆಕ್ಟ್ರಾನಿಕ್ ಮೇಲ್ವಿಚಾರಣಾ ಸಾಧನಗಳನ್ನು ಒಳಗೊಂಡಿದೆ. ಅವುಗಳು ಹೆದ್ದಾರಿಗಳಲ್ಲಿ ಘಟನೆಗಳನ್ನು (ಅಪಘಾತಗಳು ಅಥವಾ ಸಂಚಾರ ಉಲ್ಲಂಘನೆ) ತ್ವರಿತವಾಗಿ ಪತ್ತೆಹಚ್ಚುವುದು ಮತ್ತು ಹೆದ್ದಾರಿಯ ಪರಿಸ್ಥಿತಿಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ. ಇದರಿಂದಾಗಿ ಘಟನಾ ಸ್ಥಳಕ್ಕೆ ಸಹಾಯ ಅಥವಾ ತುರ್ತು ಸೇವೆಗಳನ್ನು ವೇಗವಾಗಿ ನಿಯೋಜಿಸಲು ಅವಕಾಶ ನೀಡುತ್ತದೆ' ಎಂದು ಅವರು ಹೇಳಿದರು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಹೆಚ್ಚಿನ ಸಂಚಾರ ಮತ್ತು ಹೆಚ್ಚಿನ ವೇಗದ ರಸ್ತೆ ಕಾರಿಡಾರ್‌ಗಳಲ್ಲಿ ATMS ಅಳವಡಿಕೆಯನ್ನು ಯೋಜನೆಯ ಭಾಗವಾಗಿ ಪೂರ್ವನಿಯೋಜಿತವಾಗಿಯೇ ಸೇರಿಸಲಾಗುತ್ತದೆ. ಅಲ್ಲದೆ, ಈಗಾಗಲೇ ನಿರ್ಮಿಸಲಾದ ಪ್ರಮುಖ ಕಾರಿಡಾರ್‌ಗಳಲ್ಲಿ ATMS ಅನ್ನು ಸ್ವತಂತ್ರ ಯೋಜನೆಯಾಗಿಯೂ ಅಳವಡಿಸಲಾಗಿದೆ ಎಂದು ಸಚಿವರು ಹೇಳಿದರು.
ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಕಳೆದ ಮೂರು ವರ್ಷಗಳಲ್ಲಿ 1,12,561 ಕಿಮೀ ರಾಷ್ಟ್ರೀಯ ಹೆದ್ದಾರಿಗಳಿಗೆ ರಸ್ತೆ ಸುರಕ್ಷತಾ ಲೆಕ್ಕಪರಿಶೋಧನೆ ನಡೆಸಲಾಗಿದೆ ಎಂದು ಹೇಳಿದರು.