ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜುಲೈ 25ರ ಶುಕ್ರವಾರ ದೇಶದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ದಾಟಿದ್ದಾರೆ. ಸತತವಾಗಿ ಭಾರತದ ಎರಡನೇ ಅತಿ ಹೆಚ್ಚು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಈ ಮೂಲಕ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನು ಮೀರಿಸಿದ್ದಾರೆ. ಗಮನಾರ್ಹವಾಗಿ, ಈ ಸಾಧನೆಯಿಂದ ಗುರುತಿಸಿಕೊಂಡ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಕೂಡ ನರೇಂದ್ರ ಮೋದಿಯವರಾಗಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಜನಿಸಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದಿಯೇತರ ರಾಜ್ಯದಿಂದ ಬಂದವರಾಗಿ ಪ್ರಧಾನಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದವರೆಂಬ ಕೀರ್ತಿ ಕೂಡ ಸೇರಿಕೊಂಡಿದೆ.
74 ವರ್ಷದ ನರೇಂದ್ರ ಮೋದಿ ಅವರು ಮೇ 26, 2014 ರಂದು ಮೊದಲ ಬಾರಿಗೆ ಭಾರತ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಲ್ಲಿಯವರೆಗೆ ಒಟ್ಟು 11 ವರ್ಷ 60 ದಿನಗಳು ಅಧಿಕಾರದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸತತವಾಗಿ 11 ವರ್ಷ 59 ದಿನಗಳು ಅಧಿಕಾರದಲ್ಲಿದ್ದರು.
ಇಂದಿರಾ ಗಾಂಧಿಯವರು ಜನವರಿ 24, 1966 ರಿಂದ ಮಾರ್ಚ್ 24, 1977 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದರು. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಆಗಸ್ಟ್ 15, 1947 ರಿಂದ ಮೇ 27, 1964 ರವರೆಗೆ ಸತತ 16 ವರ್ಷ ಮತ್ತು 286 ದಿನಗಳ ಕಾಲ ಭಾರತದ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ಹೊಂದಿದ್ದಾರೆ.
ಭಾರತದ ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಪ್ರಧಾನಿ ಮೋದಿ ಅವರು ಈ ಹಿಂದೆ 2014 ರಿಂದ 2019 ರವರೆಗೆ ಮತ್ತು ಎರಡನೇ ಅವಧಿಗೆ 2019 ರಿಂದ 2024 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಕ್ಟೋಬರ್ 2001 ರಿಂದ ಮೇ 2014 ರವರೆಗೆ ಅವರು ಗುಜರಾತ್‌ನ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.