ಜಮ್ಮು: ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಾರಿ ಮಹಿಳೆಯೊಬ್ಬರು ಲಾಂಗ್ ತೆಗೆದು ಬೆದರಿಕೆ ಹಾಕಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಜಮ್ಮು ನಗರದ ಕೆನಾಲ್ ರಸ್ತೆಯಲ್ಲಿ ಈ ನಡೆದಿದ್ದು, ರಸ್ತೆಯಲ್ಲಿ ಸಂಭವಿಸಿದ ಸಣ್ಣಕಾಳಗ ತಾರಕಕ್ಕೇರಿ ಸಂಘರ್ಷಕ್ಕೆ ತಿರುಗಿದೆ. ಈ ವೇಳೆ ಮಹಿಳೆಯೊಬ್ಬರು ಲಾಂಗ್ ಹೊರಗೆ ತೆಗೆದು ಬೆದರಿಸಿದ್ದಾರೆ. ಇದನ್ನು ದಾರಿಹೋಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ವರದಿಗಳ ಪ್ರಕಾರ, ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರನ್ನು ಹಿಂದಿನಿಂದ ಬಂದ ಮತ್ತೊಂದು ಕಾರು ಟಚ್ ಮಾಡಿದೆ. ಈ ವೇಳೆ ಕಾರು ನಿಲ್ಲಿಸಿ ಕೆಳಗಿಳಿದ ಮಹಿಳೆ ಪಂಜಾಬಿಯಲ್ಲಿ ಗಂಡಸ ಎಂದೂ ಕರೆಯಲ್ಪಡುವ ಮಚ್ಚನ್ನು ಹಿಡಿದುಕೊಂಡು ಹೊರಬಂದಿದ್ದಾಳೆ. ಆಕೆ ಕೈಯಲ್ಲಿ ಮಚ್ಚನ್ನು ಹಿಡಿದುಕೊಂಡು ಇತರ ಚಾಲಕನ ಕಾಲರ್ ಹಿಡಿದು ಮನಸೋ ಇಚ್ಛೆ ಬೈದಿದ್ದಾಳೆ.
ಈ ವೇಳೆ ಭದ್ರತಾ ಸಿಬ್ಬಂದಿಯೊಬ್ಬ ಮಧ್ಯಪ್ರವೇಶಿಸಿದಾಗ ತನ್ನ ಅಸ್ವಸ್ಥ ಪತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಪೊಲೀಸ್ ಪ್ರತಿಕ್ರಿಯೆ
ಇನ್ನು ವಿಚಾರ ಬೆಳಕಿಗೆ ಬರುತ್ತಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆ ಕೈಯಲ್ಲಿದ್ದ ಮಚ್ಚನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಇಬ್ಬರೂ ಚಾಲಕರನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದ್ದಾರೆ. ಬಳಿಕ ಮಹಿಳೆಗೆ ಬುದ್ದಿವಾದ ಹೇಳಿದ್ದು, ಅಂತಹ ನಡವಳಿಕೆಯ ಅಪಾಯಗಳ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
"ಸಾರ್ವಜನಿಕವಾಗಿ ಆಯುಧವನ್ನು ಹಿಡಿದುಕೊಳ್ಳುವುದು, ವಿಶೇಷವಾಗಿ ಆತ್ಮರಕ್ಷಣೆ ಹೊರತುಪಡಿಸಿ ಬೇರೆ ಯಾವುದಕ್ಕೂ, ಇದು ಕಾನೂನುಬಾಹಿರ ಮತ್ತು ಅತ್ಯಂತ ಅಪಾಯಕಾರಿ" ಎಂದು ಅಧಿಕಾರಿಯೊಬ್ಬರು ಹೇಳಿದರು. ಸಂಚಾರಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳ ಸಮಯದಲ್ಲಿ ತಾಳ್ಮೆ ಮತ್ತು ಸಂಯಮವನ್ನು ವಹಿಸುವಂತೆ ಅಧಿಕಾರಿಗಳು ನಾಗರಿಕರನ್ನು ಒತ್ತಾಯಿಸಿದರು.