ಲಖನೌ: ತನ್ನ ಯು ಟ್ಯೂಬ್ ಚಾನೆಲ್ ನಲ್ಲಿ ಅಶ್ಲೀಲ ಮತ್ತು ನಿಂದನೀಯ ಕಂಟೆಂಟ್ ಒಳಗೊಂಡಿರುವ ವಿಡಿಯೋ ಹಂಚಿಕೊಳ್ಳುತ್ತಿದ್ದ ಖ್ಯಾತ ಯು ಟ್ಯೂಬರ್ ಮೊಹಮ್ಮದ್ ಅಮೀರ್ ಎಂಬಾತನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈತನ ಯುಟ್ಯೂಬ್ ಚಾನೆಲ್ ಗೆ 5.83 ಮಿಲಿಯನ್ ಚಂದಾದಾರಿದ್ದಾರೆ.
ಈ ಸಂಬಂಧ ಪೊಲೀಸರು ಮತ್ತು ಸ್ಥಳೀಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡದಿಂದ ಸಮಗ್ರ ತನಿಖೆ ನಡೆಸಿದಾಗ ಅಮೀರ್ ಚಾನೆಲ್ ತುಂಬೆಲ್ಲಾ ಅಶ್ಲೀಲ, ನಿಂದನೀಯ ಮತ್ತು ಜನರ ಹಾದಿ ತಪ್ಪಿಸುವ ಕಂಟೆಂಟ್ ಗಳೇ ಕಂಡುಬಂದಿದ್ದು, ತದನಂತರ ಪೊಲೀಸರು ಬಂಧಿಸಿದ್ದಾರೆ.
ಅಮನ್ ಠಾಕೂರ್ ಎಂಬವರು ಸಮಾಜದ ಸ್ವಾಸ್ತ್ಯ ಕದಡುತ್ತಿರುವ ಯುಟ್ಯೂಬರ್ ಮೊಹಮ್ಮದ್ ಆಮೀರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದರು. ಹಾಗೆಯೇ ಮೊಹಮ್ಮದ್ ಅಮೀರ್‌ನ ವಿಡಿಯೋಗಳನ್ನು ಮೊರಾದಾಬಾದ್ ಮತ್ತು ಉತ್ತರ ಪ್ರದೇಶ ಪೊಲೀಸರ ಗಮನಕ್ಕೆ ತಂದಿದ್ದರು.
ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್: ಟಾಪ್ ರಿಯಲ್ ಟೀಮ್ ಎಂಬ ಯು ಟ್ಯೂಬ್ ಚಾನೆಲ್ ನಡೆಸುತ್ತಿರುವ ಅಮೀರ್ ಹಾಗೂ ಆತನ ತಂಡ ಸಮಾಜದ ಸ್ವಾಸ್ಥ್ಯ ಹದಗೆಡಿಸುವ ವಿಡಿಯೋಗಳನ್ನು ಫೋಸ್ಟ್ ಮಾಡುವ ಮೂಲಕ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ. ಸಂತರು ಮತ್ತು ದೇವತೆಗಳ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡುತ್ತಿದ್ದನು. ಈ ಮೂಲಕ ಸಮಾಜದಲ್ಲಿ ದ್ವೇಷ ಹರಡುವ ಕೆಲಸ ಮಾಡುತ್ತಿದ್ದ ಎಂಬ ಆರೋಪಗಳು ಮೊಹಮ್ಮದ್ ಆಮೀರ್ ಕೇಳಿ ಬಂದಿದ್ದವು. ಚಾನೆಲ್‌ನಲ್ಲಿ ಆಗಾಗ್ಗೆ ನಿಂದನೀಯ ಮತ್ತು ಅಶ್ಲೀಲ ಭಾಷೆ ಬಳಸುತ್ತಿದ್ದರಿಂದ ಅದರ ಜನಪ್ರಿಯತೆ ಹೆಚ್ಚಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದುರುದ್ದೇಶಪೂರಿತ ವಿಡಿಯೋ: ಪೊಲೀಸರ ಸಾಮಾಜಿಕ ಮಾಧ್ಯಮ ತಂಡವು ಚಾನೆಲ್‌ನ ಸಮಗ್ರ ವಿಶ್ಲೇಷಣೆ ನಡೆಸಿದ್ದು, ಅಮೀರ್ ಸಾಮಾಜಿಕ ಸಾಮರಸ್ಯ ಮತ್ತು ಕಾನೂನು, ಸುವ್ಯವಸ್ಥೆಗೆ ಭಂಗ ತರುವಂತಹ ದುರುದ್ದೇಶಪೂರಿತ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ತೀರ್ಮಾನಿಸಿದೆ. ವೀಡಿಯೊಗಳನ್ನು ಪ್ರಚೋದನಕಾರಿ ಮತ್ತು ಹಾನಿಕಾರಕ ಎಂದು ವಿವರಿಸಲಾಗಿದೆ. ನಿಂದನೀಯ ಭಾಷೆ ಮತ್ತು ದುರುದ್ದೇಶಪೂರಿತ ಪ್ರಚಾರದಿಂದ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ಅಮೀರ್ ಎಂಬ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮ ತಂಡ ಸಮಗ್ರವಾಗಿ ಕಂಟೆಂಟ್ ವಿಶ್ಲೇಷಿಸುತ್ತಿದ್ದು, ಇದರಲ್ಲಿ ತೊಡಗಿರುವ ಪ್ರತಿಯೊಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ರಣವಿಜಯ್ ತಿಳಿಸಿದ್ದಾರೆ.