ನವದೆಹಲಿ: ಉಭಯ ದೇಶಗಳ ನಡುವಿನ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕಾಗಿ ಮುಂದಿನ ಸುತ್ತಿನ ಮಾತುಕತೆಗಾಗಿ ಅಮೆರಿಕದ ತಂಡ ಆಗಸ್ಟ್ 25 ರಂದು ಭಾರತಕ್ಕೆ ಭೇಟಿ ನೀಡಲಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಮುಂದಿನ ತಿಂಗಳ ಕೊನೆಯಲ್ಲಿ ಅಮೆರಿಕ ತಂಡ ಆಗಮಿಸುತ್ತಿದ್ದರೂ, ಆಗಸ್ಟ್ 1ಕ್ಕೂ ಮೊದಲು ಮಧ್ಯಂತರ ವ್ಯಾಪಾರ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ.
ಭಾರತ ಸೇರಿದಂತೆ ಹಲವು ದೇಶಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಗಡುವು ಆಗಸ್ಟ್ 1ಕ್ಕೆ ಅಂತ್ಯಗೊಳ್ಳಲಿದೆ. ಈ ಮಧ್ಯೆ ಭಾರತದೊಂದಿಗೆ ಆರನೇ ಸುತ್ತಿನ ಮಾತುಕತೆಗಾಗಿ ಅಮೆರಿಕದ ತಂಡ ಆಗಸ್ಟ್ 25 ರಂದು ಭಾರತಕ್ಕೆ ಭೇಟಿ ನೀಡುತ್ತಿದೆ.
ವ್ಯಾಪಾರ ಒಪ್ಪಂದದ ಕುರಿತು ಭಾರತದೊಂದಿಗೆ ಹೆಚ್ಚಿನ ಮಾತುಕತೆಗಳು ಬೇಕಾಗುತ್ತದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮೀಸನ್ ಗ್ರೀರ್ ಹೇಳಿರುವುದರಿಂದ ಮಧ್ಯಂತರ ಒಪ್ಪಂದ ಏರ್ಪಡುವ ನಿರೀಕ್ಷೆ ಇದೆ.
"ನಾವು ನಮ್ಮ ಭಾರತೀಯ ಸಹವರ್ತಿಗಳೊಂದಿಗೆ ಮಾತನಾಡುವುದನ್ನು ಮುಂದುವರಿಸುತ್ತೇವೆ. ನಾವು ಯಾವಾಗಲೂ ಅವರೊಂದಿಗೆ ಬಹಳ ರಚನಾತ್ಮಕ ಚರ್ಚೆಗಳನ್ನು ನಡೆಸಿದ್ದೇವೆ" ಎಂದು ಗ್ರೀರ್ ಸೋಮವಾರ CNBC ಗೆ ತಿಳಿಸಿದ್ದರು.
ಆಗಸ್ಟ್ 1 ರ ಗಡುವನ್ನು ಮತ್ತಷ್ಟು ವಿಸ್ತರಿಸದಿದ್ದರೆ ಅಥವಾ ಎರಡೂ ದೇಶಗಳ ನಡುವೆ ಮಧ್ಯಂತರ ಒಪ್ಪಂದಕ್ಕೆ ಬರದಿದ್ದರೆ, ಭಾರತೀಯ ರಫ್ತುದಾರರು ಅಸ್ತಿತ್ವದಲ್ಲಿರುವ ಶೇ. 10 ರಷ್ಟು ಸುಂಕದ ಜೊತೆಗೆ ಶೇ. 16 ರಷ್ಟು ಹೆಚ್ಚುವರಿ ಸುಂಕ ಕಟ್ಟಬೇಕಾಗುತ್ತದೆ.