ನವದೆಹಲಿ: ಸಂಸತ್ತಿನಲ್ಲಿ ಆಪರೇಷನ್ ಸಿಂದೂರ್ ಕುರಿತ ಚರ್ಚೆಯ ಮರುದಿನ ಮುಂಗಾರು ಅಧಿವೇಶನದ 8ನೇ ದಿನವಾದ ಇಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಸದನದ ನಾಯಕ ಜೆ.ಪಿ. ನಡ್ಡಾ ಅವರು ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಇಂದು ಮೊದಲು ಸದನದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್, ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ಬಗ್ಗೆ ಮಾತನಾಡಿದರು.
ಭಾರತವು 1947 ರಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ ಮೋದಿ ಸರ್ಕಾರ ನೆಹರೂ ಅವರ ನೀತಿಗಳ ತಪ್ಪುಗಳನ್ನು ಸರಿಪಡಿಸಿದೆ. ಅಂದಿನ ಪ್ರಧಾನಿ ನೆಹರೂರವರು ಪಾಕಿಸ್ತಾನದೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ್ದು ಶಾಂತಿ ಪಡೆಯಲು ಅಲ್ಲ, ಬದಲಿಗೆ ತುಷ್ಠೀಕರಣಕ್ಕಾಗಿ ಎಂದರು.
ಸಿಂಧೂ ಜಲ ಒಪ್ಪಂದವು ಹಲವು ವಿಧಗಳಲ್ಲಿ ಬಹಳ ವಿಶಿಷ್ಟವಾದ ಒಪ್ಪಂದವಾಗಿದೆ. ಒಂದು ದೇಶವು ತನ್ನ ಪ್ರಮುಖ ನದಿಗಳನ್ನು ಆ ನದಿಯ ಮೇಲೆ ಹಕ್ಕುಗಳಿಲ್ಲದೆ ಮುಂದಿನ ದೇಶಕ್ಕೆ ಹರಿಯಲು ಅನುಮತಿಸಿದ ವಿಶ್ವದ ಯಾವುದೇ ಒಪ್ಪಂದವನ್ನು ನಾವು ಯೋಚಿಸಲೂ ಸಾಧ್ಯವಿಲ್ಲ. ಆದ್ದರಿಂದ ಇದು ಅಸಾಧಾರಣ ಒಪ್ಪಂದವಾಗಿತ್ತು. ನಾವು ಅದನ್ನು ಸ್ಥಗಿತಗೊಳಿಸಿದಾಗ, ಈ ಘಟನೆಯ ಇತಿಹಾಸವನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ.
ನಿನ್ನೆ ನಾನು ಜನರನ್ನು ಕೇಳಿದೆ, ಕೆಲವರು ಐತಿಹಾಸಿಕ ವಿಷಯಗಳನ್ನು ಮರೆತುಬಿಡಬೇಕೆಂದು ಬಯಸುತ್ತಾರೆ. ಅವರು ಕೆಲವು ವಿಷಯಗಳನ್ನು ಮಾತ್ರ ನೆನಪಿಸಿಕೊಳ್ಳಲು ಇಷ್ಟಪಡುತ್ತಾರೆ ಎಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.
ಪಾಕಿಸ್ತಾನವು ಭಯೋತ್ಪಾದನೆಗೆ ತನ್ನ ಬೆಂಬಲವನ್ನು ತ್ಯಜಿಸುವವರೆಗೆ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಗುತ್ತದೆ. ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿ ತೀವ್ರ ಖಂಡನೀಯ. ಹೊಣೆಗಾರಿಕೆ ಮತ್ತು ನ್ಯಾಯ ಇರಬೇಕಿತ್ತು ಎಂದರು.
ಕಳೆದ ದಶಕದಿಂದ ಭಾರತ, ಭಯೋತ್ಪಾದನೆ ವಿಷಯವನ್ನು ಜಾಗತಿಕ ಕಾರ್ಯಸೂಚಿಯಲ್ಲಿ ಇರಿಸಲು ಸಾಧ್ಯವಾಗಿದೆ. ಅದು BRICS, SCO, QUAD ಆಗಿರಲಿ ಅಥವಾ ದ್ವಿಪಕ್ಷೀಯ ಮಟ್ಟದಲ್ಲಿರಲಿ, 26 ವರ್ಷಗಳಿಂದ ಬೇಕಾಗಿದ್ದ ತಹವ್ವೂರ್ ರಾಣಾನನ್ನು ಅಂತಿಮವಾಗಿ ಮೋದಿ ಸರ್ಕಾರ ಮರಳಿ ಕರೆತಂದು ಇಂದು ದೇಶದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ ಎಂದರು.
ಪ್ರಧಾನಿ-ಟ್ರಂಪ್ ಮಧ್ಯೆ ಕರೆಯಿಲ್ಲ
ಏಪ್ರಿಲ್ 22 ರಿಂದ ಜೂನ್ 16 ರವರೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವೆ ಒಂದೇ ಒಂದು ಫೋನ್ ಕರೆ ಕೂಡ ನಡೆದಿಲ್ಲ ಎಂದು ರಾಜ್ಯಸಭೆಯಲ್ಲಿ ಆಪರೇಷನ್ ಸಿಂದೂರ್ ಕುರಿತು ಚರ್ಚೆಯ ಸಂದರ್ಭದಲ್ಲಿ ಜೈಶಂಕರ್ ಹೇಳಿದರು.
ಆಪರೇಷನ್ ಸಿಂದೂರ್ ಆರಂಭವಾದಾಗ, ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಮತ್ತು ಇದು ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದನ್ನು ನೋಡಲು ಹಲವಾರು ದೇಶಗಳು ನಮ್ಮನ್ನು ಸಂಪರ್ಕಿಸಿದ್ದವು... ನಾವು ಯಾವುದೇ ಮಧ್ಯಸ್ಥಿಕೆಗೆ ಮುಕ್ತವಾಗಿಲ್ಲ ಎಂದು ಎಲ್ಲಾ ದೇಶಗಳಿಗೆ ಒಂದೇ ಸಂದೇಶವನ್ನು ನೀಡಿದ್ದೇವೆ. ನಮ್ಮ ಮತ್ತು ಪಾಕಿಸ್ತಾನದ ನಡುವಿನ ಯಾವುದೇ ವಿಷಯವು ದ್ವಿಪಕ್ಷೀಯವಾಗಿರುತ್ತದೆ. ನಾವು ಪಾಕಿಸ್ತಾನದ ದಾಳಿಗೆ ಪ್ರತಿಕ್ರಿಯಿಸಿದ್ದೇವೆ, ಮುಂದೆಯೂ ಪ್ರತಿಕ್ರಿಯಿಸುತ್ತಲೇ ಇರುತ್ತೇವೆ. ಆ ಹೋರಾಟ ನಿಲ್ಲಬೇಕಾದರೆ, ಪಾಕಿಸ್ತಾನವು ಡಿಜಿಎಂಒ ಮೂಲಕ ವಿನಂತಿ ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆ ಕುರಿತು ಮಾತನಾಡುತ್ತಾ ವಿದೇಶಾಂಗ ಸಚಿವರು, ನಾವು ಪಾಕಿಸ್ತಾನ ದಾಳಿಗೆ ಪ್ರತಿಕ್ರಿಯೆ ನೀಡಿದ್ದೇವೆ. ಅದು ದಾಳಿ ಮಾಡಿದಾಗಲೆಲ್ಲಾ ನಾವು ಪ್ರತಿಕ್ರಿಯಿಸುತ್ತಲೇ ಇರುತ್ತೇವೆ. ಭಾರತ ಮಧ್ಯಸ್ಥಿಕೆಗೆ ಮುಕ್ತವಾಗಿಲ್ಲ, ನಾವು ಪರಮಾಣು ಬೆದರಿಕೆಯನ್ನು ಒಪ್ಪುವುದಿಲ್ಲ ಎಂಬ ಸಂದೇಶ ನೀಡಿದ್ದೇವೆ ಎಂದರು.
ಟಿಆರ್‌ಎಫ್ ನ್ನು ಭಯೋತ್ಪಾದಕ ಘಟಕವೆಂದು ಅಮೆರಿಕ ಘೋಷಿಸಲು ಮೋದಿ ಸರ್ಕಾರದ ಪ್ರಯತ್ನಗಳ ಬಗ್ಗೆಯೂ ವಿದೇಶಾಂಗ ಸಚಿವರು ಮಾತನಾಡಿದರು.
ಭಾರತದ ರಾಜತಾಂತ್ರಿಕತೆಯು ಟಿಆರ್‌ಎಫ್ ನ್ನು ಭಯೋತ್ಪಾದಕ ಸಂಘಟನೆ ಎಂದು ಅಮೆರಿಕದಿಂದ ಘೋಷಿಸುವಲ್ಲಿ ಯಶಸ್ವಿಯಾಗಿದೆ. ರೆಸಿಸ್ಟೆನ್ಸ್ ಫ್ರಂಟ್ (TRF) ಪಾಕಿಸ್ತಾನ ಮೂಲದ ಎಲ್‌ಇಟಿಯ ಪ್ರಾಕ್ಸಿ ಎಂದು ನಾವು ಯುಎನ್ ಮಾನ್ಯತೆಯನ್ನು ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂದೂರ್ ಕುರಿತ ವಿಶೇಷ ಚರ್ಚೆ ಸಂಸತ್ತಿನಲ್ಲಿ ಮೂರನೇ ದಿನಕ್ಕೆ ಕಾಲಿಟ್ಟಾಗ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಆಪರೇಷನ್ ಸಿಂದೂರ್ ಚರ್ಚೆಯ ಕುರಿತು ಸಂಸತ್ತಿನಲ್ಲಿ ಸರ್ಕಾರದ ಉತ್ತರವನ್ನು ಮುನ್ನಡೆಸಿದರು.