ಶಹಜಹಾನ್‌ಪುರ: ಉತ್ತರಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಪುವೈಯಾನ್‌ನ ಎಸ್‌ಡಿಎಂ ಆಗಿ ನೇಮಕಗೊಂಡಿದ್ದ ಐಎಎಸ್ ಅಧಿಕಾರಿ ರಿಂಕು ಸಿಂಗ್ ರಾಹಿ (Rinku Singh Rahi) ಅವರನ್ನು ಕೇವಲ 36 ಗಂಟೆಗಳಲ್ಲೇ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆಗೆ ಕಾರಣವಾಗಿದ್ದು ಅದೊಂದು ವಿಡಿಯೋ.. ಹೌದು... ರಿಂಕು ಸಿಂಗ್ ಅವರು ವಕೀಲರ ಪ್ರತಿಭಟನೆ ವೇಳೆ ಐದು ಬಸ್ಕಿ ಹೊಡೆದಿದ್ದರು.
ಜುಲೈ 28 ರಂದು ರಾತ್ರಿ 11 ಗಂಟೆ ಸುಮಾರಿಗೆ ಐಎಎಸ್ ರಾಹಿ ಅವರು, ಪುವೈಯಾನ್ ಎಸ್‌ಡಿಎಂ ಆಗಿ ಅಧಿಕಾರ ವಹಿಸಿಕೊಂಡರು. ಮರುದಿನ, ಅಂದರೆ ಜುಲೈ 29 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡರು. ಕರ್ತವ್ಯದ ಸಮಯದಲ್ಲಿ, ಅವರು ತಹಸಿಲ್ ಆವರಣವನ್ನು ಪರಿಶೀಲಿಸಿದರು. ತಪಾಸಣೆ ಸಮಯದಲ್ಲಿ ಆವರಣವು ತೀರಾ ಕೊಳಕಾಗಿತ್ತು. ಕೆಲವರು ತೆರೆದ ಸ್ಥಳದಲ್ಲೇ ಮೂತ್ರ ವಿಸರ್ಜಿಸುತ್ತಿದ್ದರು. ಈ ವೇಳೆ ರಾಹಿ ಅವರು, ಗುಮಾಸ್ತರಿಗೆ ಬಸ್ಕಿ ಹೊಡೆಯುವಂತೆ ಮಾಡಿ ಶಿಸ್ತಿನ ಪಾಠ ಕಲಿಸಿದರು. ನಂತರ ವಕೀಲರು ಆವರಣದಲ್ಲಿರುವ ಕೊಳಕು ಶೌಚಾಲಯ ಹಾಗೂ ಅಶುಚಿತ್ವದ ಕುರಿತು ಪ್ರತಿಭಟನೆ ನಡೆಸಿದರು.
ಧರಣಿಯಲ್ಲಿ ಕುಳಿತಿದ್ದ ವಕೀಲರನ್ನು ಭೇಟಿ ಮಾಡಲು ರಿಂಕು ಸಿಂಗ್ ಬಂದಾಗ, ತಹಸಿಲ್ ಆವರಣದ ಶೌಚಾಲಯಗಳು ತುಂಬಾ ಕೊಳಕಾಗಿವೆ. ಇದರಿಂದಾಗಿ ವಕೀಲರು ಮತ್ತು ಅವರ ಸಿಬ್ಬಂದಿಯನ್ನು ತೆರೆದ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಅವರಿಗೆ ತಿಳಿಯಿತು. ಇದರ ಬಗ್ಗೆ, ತಮ್ಮ ಜವಾಬ್ದಾರಿಯನ್ನು ಒಪ್ಪಿಕೊಂಡ ರಾಹಿ, ವಕೀಲರ ಮಧ್ಯೆ ಕಿವಿಗಳನ್ನು ಹಿಡಿದುಕೊಂಡು ಐದು ಬಾರಿ ಬಸ್ಕಿ ಹೊಡೆದು ಮುಂದೆ ಸ್ವಚ್ಛತಾ ವ್ಯವಸ್ಥೆಯನ್ನು ಸುಧಾರಿಸುವುದಾಗಿ ಹೇಳಿದರು.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ರಾಜ್ಯ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐಎಎಸ್ ರಾಹಿ ಅವರನ್ನು ಹುದ್ದೆಯಿಂದ ತೆಗೆದುಹಾಕಿದ್ದು ಅವರನ್ನು ಲಕ್ನೋದ ಕಂದಾಯ ಮಂಡಳಿಗೆ ವರ್ಗಾಯಿಸಲಾಗಿದೆ.
ರಿಂಕು ಸಿಂಗ್ ರಾಹಿ ಅವರನ್ನು ತೀಕ್ಷ್ಣ ಮತ್ತು ಪ್ರಾಮಾಣಿಕ ಅಧಿಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕೂ ಮುನ್ನ ಅವರು ಬಹಿರಂಗವಾಗಿ ಮಾತನಾಡುವ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಹಲವು ಬಾರಿ ಸುದ್ದಿಯಾಗಿದ್ದರು. ಆದಾಗ್ಯೂ, ಈ ಬಾರಿ ಅವರ "ಸರಳತೆ ಮತ್ತು ಜವಾಬ್ದಾರಿ" ತುಂಬಿದ ಕ್ರಮದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಕಂಡುಬರುತ್ತಿವೆ. ಕೆಲವರು ಅವರ ಪ್ರಾಮಾಣಿಕತೆಯನ್ನು ಮೆಚ್ಚುತ್ತಿದ್ದರೆ, ಇನ್ನು ಕೆಲವರು ಇದನ್ನು 'ಶಿಷ್ಟಾಚಾರಕ್ಕೆ ವಿರುದ್ಧ' ಎಂದು ಕರೆಯುತ್ತಿದ್ದಾರೆ. ಹೊಸ ಜವಾಬ್ದಾರಿಯಲ್ಲಿ ರಾಹಿಗೆ ಯಾವ ರೀತಿಯ ಕೆಲಸದ ಹೊರೆ ನೀಡಲಾಗುತ್ತದೆ. ಅವರಿಗೆ ಮತ್ತೆ ಕ್ಷೇತ್ರ ಜವಾಬ್ದಾರಿ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.