ನವದೆಹಲಿ: ಭಾರತದ ಉತ್ಪನ್ನಗಳ ಮೇಲೆ ಶೇ 25 ರಷ್ಟು ಸುಂಕ ವಿಧಿಸಿದ ನಂತರ ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
'ಭಾರತದ ರಫ್ತುಗಳು ಈಗ ಶೇ 25ರಷ್ಟು ಸುಂಕದೊಂದಿಗೆ ಬರಲಿವೆ ಎಂದು ಟ್ರಂಪ್ ಘೋಷಿಸಿದ್ದಾರೆ. ನನ್ನ ದೇಶದ (ಭಾರತ) ಸರ್ಕಾರವನ್ನು ಶ್ವೇತಭವನದಲ್ಲಿರುವ ಬಫೂನ್-ಇನ್-ಚೀಫ್ ಬೆದರಿಸುತ್ತಿರುವುದನ್ನು ನೋಡಲು ದುಃಖವಾಗಿದೆ' ಎಂದು ಓವೈಸಿ ಹೇಳಿದರು.
'ರಷ್ಯಾ ಜೊತೆ ವ್ಯಾಪಾರ ಮಾಡುವುದಕ್ಕೆ ಪ್ರತಿಯಾಗಿ ನಮ್ಮ ಮೇಲೆ ಈ ಸುಂಕವನ್ನು ವಿಧಿಸಲಾಗಿದೆ. ಭಾರತವು ಸ್ವತಂತ್ರ ಸಾರ್ವಭೌಮ ದೇಶ. ಚಕ್ರವರ್ತಿಯ ಆಸ್ಥಾನದಲ್ಲಿ ಸಲಾಮಿ ನೀಡುವ ಸಾಮಂತ ರಾಜ್ಯವಲ್ಲ' ಎಂದು ಅವರು ಹೇಳಿದರು.
ಈ ಕ್ರಮಗಳು ನಮ್ಮ ಸಾರ್ವಭೌಮತ್ವ ಮತ್ತು ಆರ್ಥಿಕ ಸ್ಥಾನಮಾನದ ಮೇಲೆ ಸ್ಪಷ್ಟ ಮತ್ತು ಉದ್ದೇಶಪೂರ್ವಕ ದಾಳಿಯಾಗಿದೆ. ಭಾರತದ ವಿರುದ್ಧ ಹೆಚ್ಚುತ್ತಿರುವ ಪ್ರತಿಕೂಲ ವ್ಯಾಪಾರ ಪರಿಸ್ಥಿತಿಗಳ ವಿಷಯವನ್ನು ನಾನು ವರ್ಷಗಳಿಂದ ಸಂಸತ್ತಿನಲ್ಲಿ ಮಾತನಾಡಿದ್ದೇನೆ. ಈ ಸುಂಕಗಳು ಭಾರತೀಯ MSMEಗಳು, ತಯಾರಕರು, ಐಟಿ ಸಂಸ್ಥೆಗಳು, ಸೇವಾ ಪೂರೈಕೆದಾರರು ಮತ್ತು ನಮ್ಮ ರೈತರ ಮೇಲೂ ಪರಿಣಾಮ ಬೀರುತ್ತವೆ. ಅವು FDI ಅನ್ನು ತಡೆಯುತ್ತವೆ, ರಫ್ತುಗಳಿಗೆ ಹಾನಿ ಮಾಡುತ್ತವೆ ಮತ್ತು ಉದ್ಯೋಗಗಳಿಗೆ ಹಾನಿ ಮಾಡುತ್ತವೆ. ಜಪಾನ್ ಶೇ 15 ಪಾವತಿಸಿದರೆ, ವಿಯೆಟ್ನಾಂ ಶೇ 20 ಮತ್ತು ಇಂಡೋನೇಷ್ಯಾ ಶೇ 19 ರಷ್ಟು ಸುಂಕವನ್ನು ಹೊಂದಿದೆ. ಇದು US ರಫ್ತಿಗೆ ಭಾರತದ ಸ್ಪರ್ಧಾತ್ಮಕ ಪ್ರಯೋಜನದ ಮೇಲೆ ಪೆಟ್ಟು ನೀಡುತ್ತದೆ. ಇದಕ್ಕಿಂತ ಕೆಟ್ಟದ್ದು ಎಂದರೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮೌನ' ಎಂದಿದ್ದಾರೆ.
ಗುರುವಾರ ಕಾಂಗ್ರೆಸ್ ನಾಯಕ ಶಶಿ ತರೂರ್, ಭಾರತದ ಆರ್ಥಿಕತೆಯು ತುಂಬಾ 'ಗಂಭೀರ' ವಿಷಯವಾಗಿದ್ದು, ಅಮೆರಿಕ ಹೇರಿರುವ ಸುಂಕಗಳಿಂದಾಗಿ ಅಮೆರಿಕದೊಂದಿಗಿನ ಭಾರತದ ವ್ಯಾಪಾರವನ್ನು 'ನಾಶಗೊಳಿಸುತ್ತವೆ' ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಉತ್ಪನ್ನಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಿ ಆದೇಶ ಹೊರಡಿಸಿದ ಒಂದು ದಿನದ ನಂತರ, ರಷ್ಯಾ ಮತ್ತು ಭಾರತದ ವಿರುದ್ಧ ಕಿಡಿಕಾರಿದ್ದಾರೆ. 'ಭಾರತವು ರಷ್ಯಾದೊಂದಿಗೆ ಏನು ಮಾಡುತ್ತದೆ ಎಂಬುದರ ಬಗ್ಗೆ ನನಗೆ ಚಿಂತೆ ಇಲ್ಲ. ಭಾರತ ಮತ್ತು ರಷ್ಯಾ ಈಗಾಗಲೇ 'ಸತ್ತಿರುವ' ತಮ್ಮ ಆರ್ಥಿಕತೆಯನ್ನು ಇನ್ನಷ್ಟು ನೆಲಕಚ್ಚುವಂತೆ ಮಾಡಿಕೊಳ್ಳುತ್ತವೆ. ಭಾರತದೊಂದಿಗೆ ನಾವು ಅತ್ಯಂತ ಕಡಿಮೆ ವ್ಯಾಪಾರವನ್ನು ಮಾಡಿದ್ದೇವೆ. ಅಮೆರಿಕದ ಉತ್ಪನ್ನಗಳಿಗೆ ಇತರ ರಾಷ್ಟ್ರಗಳು ವಿಧಿಸುವ ತೆರಿಗೆಗಿಂತ ಭಾರತ ವಿಧಿಸುವ ಸುಂಕ ಅತಿ ಹೆಚ್ಚು' ಎಂದು ಹೇಳಿದ್ದಾರೆ.
ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕಾಗಿ ಭಾರತ ಮತ್ತು ಅಮೆರಿಕದ ನಡುವೆ ಮಾತುಕತೆ ನಡೆಯುತ್ತಿರುವಾಗಲೇ ಭಾರತದ ವಿರುದ್ಧ ಸುಂಕ ಘೋಷಣೆಯು ಅನೇಕರನ್ನು ಆಘಾತಗೊಳಿಸಿತು.